ಮಡಿಕೇರಿ, ಸೆ. ೨೯: ನಗರದಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಹೈಟೆಕ್ ಬಸ್ ನಿಲ್ದಾಣದಲ್ಲಿನ ನರಕಯಾತನೆಯ ಶೌಚಾಲಯ, ಅಶುಚಿತ್ವದ ವಾತಾವರಣ, ಬೀರು ಬಾಟಲಿ, ಚಿಪ್ಸ್ ಪ್ಯಾಕೆಟ್‌ಗಳ ತ್ಯಾಜ್ಯ ಸ್ವಚ್ಛಗೊಂಡಿದೆ. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ವಾರ್ಡ್ ೧೭ ರ ಸದಸ್ಯ ಅರುಣ್ ಶೆಟ್ಟಿ ನಿಲ್ದಾಣದಲ್ಲಿನ ಅಶುಚಿತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪೌರಾಯುಕ್ತರ ಗಮನಕ್ಕೆ ತಂದಿದ್ದರು. ಇಂದು ನಿಲ್ದಾಣ ಆವರಣ, ಶೌಚಾಲಯವನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸಿದರು. ಈ ಸಂದರ್ಭ ವಾರ್ಡ್ ಸದಸ್ಯ ಅರುಣ್ ಶೆಟ್ಟಿ ಹಾಗೂ ನಗರಸಭೆಯ ಅಧಿಕಾರಿಗಳು ಹಾಜರಿದ್ದರು.

ಶೌಚಾಲಯ ಸ್ವಚ್ಛವಾಗಿದೆ ಹೊರತು ನೀರಿನ ಸೌಲಭ್ಯವಿಲ್ಲ. ಈ ಸಂಬAಧ ನಗರಸಭೆಯ ಇಂಜಿನಿಯರ್ ಗಮನಕ್ಕೆ ತರಲಾಗುವುದಾಗಿ ಅರುಣ್ ಶೆಟ್ಟಿ ತಿಳಿಸಿದ್ದಾರೆ.

ಈ ಹಿಂದೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ಶಾಸಕ ರಂಜನ್ ಅವರು ಬೀರು ಬಾಟಲಿ, ತ್ಯಾಜ್ಯಗಳಿಂದ ಕೂಡಿದ್ದ ನಿಲ್ದಾಣದ ಅವ್ಯವಸ್ಥೆ ಸರಿಪಡಿಸಲು ಸಂಬAಧಿಸಿದವರಿಗೆ ಸೂಚಿಸಿದ ಮೇರೆಗೆ ಮುಂದಿನ ದಿನ ನಿಲ್ದಾಣ ಸ್ವಚ್ಛವಾಯಿತು.

ಆದರೆ ರಾತ್ರಿ ವೇಳೆ ಪಾನಮತ್ತವಾಗಿ ಪಾರ್ಟಿ ಮಾಡಿ ಅಲ್ಲಲ್ಲಿ ಕಸ ಎಸೆಯುವವರ ನಿಯಂತ್ರಣವಿಲ್ಲದ ಕಾರಣ ಮತ್ತೆ ಕಸದ ಕೊಂಪೆಯಾಗಿ ನಿಲ್ದಾಣ ಪರಿವರ್ತನೆಗೊಂಡಿದ್ದು, ಇದೀಗ ಸ್ವಚ್ಛಗೊಂಡಿದೆ. ಪಾರ್ಟಿ ಮಾಡುವವರು ಮತ್ತೆ ರಾತ್ರಿ ವೇಳೆ ಇಲ್ಲಿ ವಾಸ್ತವ ಹೂಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.