ಸುಂಟಿಕೊಪ್ಪ, ಸೆ. ೨೯: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ತಾ. ೨೭ ರಂದು ಏರ್ಪಡಿಸಲಾಗಿತ್ತು. ಆದರೆ ಅಂದು ತನಗೆ ರಕ್ತದೊತ್ತಡ ಹೆಚ್ಚಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಸಭೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಅಧ್ಯಕ್ಷೆ ಶಿವಮ್ಮ ಹಾಗೂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾ. ೨೭ ರಂದು ಬೆಳಿಗ್ಗೆ ೯.೩೦ ಗಂಟೆಗೆ ದಿಢೀರನೆ ರಕ್ತದೊತ್ತಡ ಅಧಿಕವಾದ ಪರಿಣಾಮ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ ನಂತರ ಕುಶಾಲನಗರ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ಸಭೆಗೆ ಗೈರಾಗಿರುವುದಿಲ್ಲ ಸದಸ್ಯರುಗಳಿಗೆ ಅಗೌರವ ತೋರುವ ಉದ್ದೇಶವಿರಲಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ತಿಳಿಸಿದ್ದಾರೆ.

ಯಾವುದೇ ಸದಸ್ಯರುಗಳನ್ನು ಕಡೆಗಣಿಸಿಲ್ಲ; ಊರಿನ ಅಭಿವೃದ್ಧಿ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ ಪಂಗಡಕ್ಕೆ ಶಾಸಕರ ನಿಧಿಯಿಂದ ಮೀಸಲಿಟ್ಟ ಅನುದಾನ ವಿತರಿಸುವಾಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರಿಗೆ ಮಾಹಿತಿ ನೀಡದೆ ಕಡೆಗಣಿಸಲಾಗಿದೆ. ಬಡವರಿಗೆ ಲಾಕ್‌ಡೌನ್ ಸಂದರ್ಭ ಕೊರೊನಾ ಕಿಟ್ ವಿತರಿಸಿದ್ದು, ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ, ೧ನೇ ತರಗತಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲಾಗಿದೆ. ಈ ಹಿಂದೆ ಗ್ರಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತು ಹತಾಶೆಗೊಂಡವರು ಅನ್ಯಥಾ ಪತ್ರಿಕೆ ಹೇಳಿಕೆ ನೀಡುತ್ತಿದ್ದಾರೆ. ಇವರ ವಾರ್ಡಿನಲ್ಲಿ ಪಂಚಾಯಿತಿಯ ಅಧಿಕ ಅನುದಾನ ಪಡೆಯಲಾಗಿದೆ ಎಂದು ಅಧ್ಯಕ್ಷ, ಉಪಾಧ್ಯಕ್ಷರಾದಿಯಾಗಿ ಸದಸ್ಯರುಗಳಾದ ರಫೀಕ್ ಖಾನ್, ಆಲಿಕುಟ್ಟಿ ಹಾಗೂ ಶಭೀರ್ ಸ್ಪಷ್ಟನೆ ನೀಡಿದ್ದಾರೆ.