ಮಡಿಕೇರಿ, ಸೆ. ೨೯: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕಿರುಚಿತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಎರಡು ಸ್ಥಾನ ಪಡೆದ ಕೊಡಗು ಪ್ರೆಸ್ಕ್ಲಬ್ ಸದಸ್ಯರ ಕಿರುಚಿತ್ರ ಪ್ರದರ್ಶನ ಸಂಜೆ ಪತ್ರಿಕಾಭವನದಲ್ಲಿ ನಡೆಯಿತು.
ಕೊಡಗು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಗೋಪಾಲ್ ಸೋಮಯ್ಯ ನಿರ್ಮಾಣ, ನಿರ್ದೇಶನದ ಕೊದಿ ಮೋವ, ಯುಗ ದೇವಯ್ಯ ನಿರ್ಮಾಣ, ಬೊಳ್ಳಜಿರ ಬಿ. ಅಯ್ಯಪ್ಪ ನಿರ್ದೇಶನದ ನಂಬಿಕೆ ಕಿರುಚಿತ್ರ ಪ್ರದರ್ಶನವನ್ನು ಪತ್ರಕರ್ತ ಟಿ.ಆರ್. ಪ್ರಭುದೇವ್ ಜಾದು ಮಾಡುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಎರಡೂ ಚಿತ್ರಗಳು ಸೊಗಸಾಗಿ ಮೂಡಿಬಂದಿದೆ. ಇಂದು ಶ್ರೀಮಂತರ ಮಕ್ಕಳೇ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರಕರಣಗಳು ಹೆಚ್ಚುತ್ತಿವೆ. ಜೊತೆಗೆ ಪ್ರೀತಿ ಪ್ರೇಮಕ್ಕೆ ಮಕ್ಕಳು ಹೆತ್ತವರನ್ನು ದೂರ ಮಾಡುವ ಪ್ರಕರಣಗಳೂ ಇವೆ. ಈ ಎರಡು ವಿಷಯಾಧರಿತವಾಗಿ ಕಿರುಚಿತ್ರ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ ಎಂದರು.
ಕಿರುಚಿತ್ರ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ., ಚಿತ್ರದ ವಿಮರ್ಶೆ ಕಷ್ಟದ ಕೆಲಸ. ಒಬ್ಬೊಬ್ಬರಿಗೆ ಒಂದೊAದು ರೀತಿಯಾಗಿ ಚಿತ್ರ ಕಾಣುತ್ತದೆ. ಪ್ರದರ್ಶನಗೊಂಡ ಎರಡೂ ಚಿತ್ರಗಳಲ್ಲೂ ಆಕಾಶವಾಣಿ ಬಳಸಿ ರುವುದು ಕೊಡಗಿನಲ್ಲಿ ರೇಡಿಯೋ ಮಾಧ್ಯಮ ಎಷ್ಟು ಪರಿಣಾಮಕಾರಿ ಎಂಬುವುದನ್ನು ತೋರಿಸಿದೆ. ಒಂದು ಚಿತ್ರದಲ್ಲಿ ಮಗ ಬರುತ್ತಾನೆ ಎನ್ನುವ ನಂಬಿಕೆಯಿದ್ದರೆ, ಮತ್ತೊಂದು ಚಿತ್ರದಲ್ಲಿ ಮಗಳು ಬೇಕು ಎನ್ನುವ ನಿರೀಕ್ಷೆ ಇದೆ. ಚಿತ್ರಗಳಲ್ಲಿ ಎಲ್ಲರೂ ಅದ್ಭುತವಾಗಿ ನಟಿಸುವ ಮೂಲಕ ಪಾತ್ರಗಳಿಗೆ ಜೀವಂತಿಕೆ ನೀಡಿದ್ದಾರೆ. ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರ ನಟನೆ ಚಿತ್ರದ ಮೌಲ್ಯ ಹೆಚ್ಚಿಸಿದೆ ಎಂದರು. ಚಿತ್ರ ಕಲಾವಿದ ರೂಪೇಶ್ ನಾಣಯ್ಯ ಮಾತನಾಡಿ, ಕಿರುಚಿತ್ರ ಉತ್ತಮವಾಗಿದೆ. ಕಡಿಮೆ ವೆಚ್ಚ, ಕಡಿಮೆ ಸಮಯದಲ್ಲಿ ಪರಿಣಾಮಕಾರಿಯಾಗಿ ಚಿತ್ರ ಹೊರಬಂದಿದೆ. ದೊಡ್ಡ ಸಿನಿಮಾ ಮನರಂಜನೆಗೆ ನೋಡುತ್ತೇವೆ. ನಂತರ ಮರೆಯುತ್ತೇವೆ. ಕಲಾತ್ಮಕ ಚಿತ್ರಕ್ಕೆ ಆಳದ ಅರ್ಥವಿರುತ್ತದೆ. ಹಲವು ವರ್ಷ ಕಳೆದರು ನೆನಪು ಇರುತ್ತೆ. ಕಿರು ಚಿತ್ರದಲ್ಲೂ ಕೂಡ ಸಾಮಾಜಿಕವಾಗಿ ಸಂದೇಶ ಸಾರಬೇಕು. ಸೀಮಿತ ಅವಧಿಯಲ್ಲಿ ಜನರಿಗೆ ಉತ್ತಮ ಸಂದೇಶ ನೀಡಬೇಕು. ವೀಕ್ಷಕನ ಒಂದು ಕ್ಷಣವನ್ನು ವ್ಯರ್ಥ ಮಾಡಬಾರದು. ಇದನ್ನು ಅರಿತು ಸಿನಿಮಾ ಮಾಡಬೇಕು ಎಂದು ಸಲಹೆ ನೀಡಿದರು.
ಕೊದಿಮೋವ, ನಂಬಿಕೆ ಕಿರು ಚಿತ್ರದಲ್ಲಿ ಸಾಮಾಜಿಕ ಸಂದೇಶ ಇದೆ. ನಂಬಿಕೆ ಕಿರುಚಿತ್ರದ ಛಾಯಗ್ರಹಣ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಕೆಲವು ಕಡೆಯಲ್ಲಿ ತಾಂತ್ರಿಕ ಸಮಸ್ಯೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಿ ಎಂದರು. ಹಿರಿಯ ಕಲಾವಿದ ನೆರವಂಡ ಉಮೇಶ್ ಮಾತನಾಡಿ, ಸಿನಿಮಾ ಸುಂದರ ವಾಗಿದೆ. ಈ ಎರಡೂ ಕಿರುಚಿತ್ರ ಗಳೊಂದಿಗೆ ಎಲ್ಲಾ ಕಿರುಚಿತ್ರಗಳು ಪ್ರದರ್ಶನ ಮಾಡಿದ್ದರೆ ಇತರ ಪ್ರತಿಭೆ ಗಳೂ ಬೆಳೆಯಲು ಅವಕಾಶ ವಾಗುತ್ತಿತ್ತು. ಭಾವನೆ ಜೊತೆ ಸಿನಿಮಾ ಇರಬೇಕು. ಉತ್ತಮ ಅಭಿನಯ ಎಲ್ಲ ವರ್ಗದವರಿಗೂ ತಲುಪುತ್ತದೆ. ಪ್ರತಿವರ್ಷ ಕಿರುಚಿತ್ರ ಸ್ಪರ್ಧೆ ಆಯೋಜಿ ಸುವಂತಾಗಬೇಕು. ಇದರಿಂದ ಪ್ರತಿಭೆಗಳಿಗೆ ವೇದಿಕೆ ದೊರೆಯಲಿದೆ ಎಂದರು. ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಮಾಧ್ಯಮಗಳು ಅರ್ಧ ಸತ್ಯ ತೋರಿಸುವುದರಿಂದಲೇ ಸಮಸ್ಯೆ ಉಂಟಾಗುತ್ತಿದೆ. ಯಾವುದೇ ವಿಚಾರದಲ್ಲಿ ಪರಿಪೂರ್ಣತೆ ಇರಬೇಕು. ಪತ್ರಕರ್ತರು ಮಾಧ್ಯಮದೊಂದಿಗೆ ಇತರ ಕ್ಷೇತ್ರದಲ್ಲೂ ತೊಡಗಿಸಿ ಕೊಳ್ಳಬೇಕೆಂದು ಕರೆ ನೀಡಿದರು. ಪತ್ರಕರ್ತರಾದ ಸವಿತಾ ರೈ, ಕೆ.ಎ. ಆದಿತ್ಯ, ಕುಡೆಕಲ್ ಸಂತೋಷ್, ಹೆಚ್.ಜೆ. ರಾಕೇಶ್, ಅಲ್ಲಾರಂಡ ವಿಠಲ ನಂಜಪ್ಪ, ಕಿಶೋರ್ ರೈ, ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ, ಪ್ರೆಸ್ ಕ್ಲಬ್ ಉಪಾಧ್ಯಕ್ಷ ತೇಜಸ್ ಪಾಪಯ್ಯ, ನಿರ್ದೇಶಕರಾದ ನವೀನ್ ಡಿಸೋಜ, ಸುನಿಲ್ ಪೊನ್ನಟ್ಟಿ ಮತ್ತಿತರರು ಹಾಜರಿದ್ದರು. ಪ್ರಜ್ಞಾ ರಾಜೇಂದ್ರ ಪ್ರಾರ್ಥಿಸಿ, ವಿಶ್ವಕುಂಬೂರು ಸ್ವಾಗತಿಸಿ, ಪ್ರಸೀನ್ ವಂದಿಸಿದರು.