ವೀರಾಜಪೇಟೆ, ಸೆ. ೨೯: ಗಾಂಜಾ ಮಾರಾಟಗಾರರು ಸೇರಿದಂತೆ ವ್ಯಸನಿಗಳು ಹೆಚ್ಚುತ್ತಿದ್ದು, ಕಡಿವಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಮುಂಜಾನೆ ವೇಳೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸಿ ನಾಲ್ವರು ಬಂಧನವಾದ ಘಟನೆ ನಗರದಲ್ಲಿ ಇಂದು ಮುಂಜಾನೆ ನಡೆದಿದೆ.

ವೀರಾಜಪೇಟೆ ನಗರದ ಮೊಗರಗಲ್ಲಿ ನಿವಾಸಿಗಳಾದ ಸಾಧಿಕ್ (೩೧) ಮತ್ತು ಅಲ್ತಾಫ್ (೩೨), ಬಿಟ್ಟಂಗಾಲ ಗ್ರಾಮದ ನಿವಾಸಿ ರೋಷನ್ ಹಾಗೂ ಅಮ್ಮತ್ತಿ ನಿವಾಸಿ ಕೆ. ಬೋಪಣ್ಣ (೪೨) ಅಕ್ರಮವಾಗಿ ಗಾಂಜಾ ಮಾರಾಟ ಮಾಡುತಿದ್ದ ವೇಳೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಘಟನೆಯ ವಿವರ: ಮುಂಜಾನೆ ೭.೩೦ರ ಸಮಯದಲ್ಲಿ ವೀರಾಜಪೇಟೆ ನಗರದ ಕುಳುಮೆ ಜಂಕ್ಷನ್ (ಮೂರ್ನಾಡು ರಸ್ತೆಯಿಂದ ಸಂತ ಅನ್ನಮ್ಮ ಶಾಲೆಗೆ ತೆರಳುವ ರಸ್ತೆ ತಿರುವಿನಲ್ಲಿ) ವಾಹನದಲ್ಲಿ ಕೆಲವು ಮಂದಿಗಳು ಗಾಂಜಾ ಮಾರಾಟ ಮಾಡುತ್ತಿರುವುದಾಗಿ ವೀರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗ ಉಪ ನಿರೀಕ್ಷಕ ಹೆಚ್.ಎಸ್. ಬೋಜಪ್ಪ ಅವರಿಗೆ ಮಾಹಿತಿ ಬಂದಿದೆ. ಖಚಿತ ಮಾಹಿತಿ ಅನ್ವಯ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳದಲ್ಲಿ ಕೃತ್ಯಕ್ಕೆ ಉಪಯೋಗಿಸಿದ್ದ ಮಾರುತಿ ಎಸ್‌ಎಕ್ಸ್ ಫೋರ್ ಕಾರು (ಕೆಎ ೧೨ ಪಿ ೯೫೦) ಮತ್ತು ದ್ವಿಚಕ್ರ ವಾಹನವಾದ ಹೊಂಡ ಡೀಯೊ (ಕೆಎ ೧೨ ಎಸ್ ೬೫೬೧) ವಾಹನದಲ್ಲಿ ಗಾಂಜಾ ಪತ್ತೆಯಾಗಿದೆ. ಅಲ್ಲದೆ ಬಂಧಿತ ಆರೋಪಿಗಳ ಬಳಿ ಮಾರಾಟ ಮಾಡಲು ಸಿದ್ಧಗೊಂಡಿದ್ದ ಸಣ್ಣ ಸಣ್ಣ ಗಾಂಜಾ ಪೊಟ್ಟಣಗಳು ಇರುವುದು ಬೆಳಕಿಗೆ ಬಂದಿದೆ.

ಬAಧಿತ ಆರೋಪಿಗಳಿಂದ ಒಟ್ಟು ೧ ಕೆ.ಜಿ. ೨೫೦ ಗ್ರಾಂ. ಗಾಂಜಾ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳ ಒಟ್ಟು ಬೆಲೆ ೧೦ ಲಕ್ಷಗಳಾಗಿರಬಹುದು ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಪೊಲೀಸರ ತನಿಖೆಯ ವೇಳೆಯಲ್ಲಿ ಆರೋಪಿತರು ಅಜ್ಞಾತ ಸ್ಥಳದಿಂದ ಪರಿಚಯವಿಲ್ಲದ ವ್ಯಕ್ತಿಗಳಿಂದ ಗಾಂಜಾ ಪಡೆದುಕೊಂಡು ಮಾರಾಟಕ್ಕೆ ತಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಆರೋಪಿತರ ಮೇಲೆ ವೀರಾಜಪೇಟೆ ನಗರ ಠಾಣೆಯಲ್ಲಿ ಕರ್ನಾಟಕ ರಾಜ್ಯ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯ ಅನ್ವಯ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ನಿದೆೆÃðಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್, ವೀರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ. ಹೆಚ್.ಎಸ್. ಬೋಜಪ್ಪ, ನಗರ ಪಿ.ಎಸ್.ಐ. ಜಗದೀಶ್ ಧೂಳ್ ಶೆಟ್ಟಿ, ಸಿಬ್ಬಂದಿಗಳಾದ ತೀರ್ಥಕುಮಾರ್, ರಾಮಪ್ಪ, ಮಧು, ಮುಸ್ತಾಫ, ಗಿರೀಶ್, ಶ್ರೀಕಾಂತ್, ರಜನ್ ಕುಮಾರ್, ಮೊಣ್ಣಪ್ಪ, ಮಹಿಳಾ ಸಿಬ್ಬಂದಿ ಗೀತಾ, ಧರ್ಮ ಮತ್ತು ಜಿಲ್ಲಾ ಸಿ.ಡಿ.ಆರ್. ವಿಭಾಗದ ರಾಜೇಶ್ ಮತ್ತು ಗಿರೀಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. -ಕಿಶೋರ್ ಕುಮಾರ್ ಶೆಟ್ಟಿ