ಮಡಿಕೇರಿ, ಸೆ. ೨೭: ಕೇಂದ್ರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳು ರೈತ ಹಾಗೂ ಕಾರ್ಮಿಕ ವಿರೋಧಿಯಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ರೈತ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಕೃಷಿ ಮಸೂದೆ ಕೈಬಿಡುವಂತೆ ಆಗ್ರಹಿಸಿದರು.

ವಾಹನ ಜಾಥಾ

ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಬೆಳಿಗ್ಗೆ ರೈತ ಸಂಘದ ಗೋಣಿಕೊಪ್ಪ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ರೈತರು ತಮ್ಮ, ತಮ್ಮ ವಾಹನ ಮೂಲಕ ಮಡಿಕೇರಿ ತನಕ ಜಾಥಾ ನಡೆಸಿದರು.

ಸಾರ್ವಜನಿಕರು ಬಂದ್‌ಗೆ ಸಹಕರಿಸುವಂತೆ ಧ್ವನಿ ವರ್ಧಕದ ಮೂಲಕ ರಸ್ತೆಯ ಉದ್ದಕ್ಕೂ ಪ್ರಚಾರ ನಡೆಸಿದರು. ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾವಣೆಗೊಂಡ ರೈತರು ಮಳೆಯ ನಡುವೆ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ

(ಮೊದಲ ಪುಟದಿಂದ) ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ತೆರಳಿ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಅವೈಜ್ಞಾನಿಕ ಮಸೂದೆಗಳನ್ನು ಹಿಂಪಡೆಯಬೇಕು ಅಥವಾ ಮಾರ್ಪಡಿಸಬೇಕು. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೃಷಿ ವಲಯವನ್ನು ಖಾಸಗೀಕರಣ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಕೊಡಗಿನ ಬೆಳೆಗಾರರಿಗೂ ವ್ಯತಿರಿಕ್ತ ಪರಿಣಾಮ ಉಂಟಾಗಲಿವೆೆ. ಕಾಯ್ದೆಯಿಂದ ರೈತರ ಆದಾಯ ದ್ವಿಗುಣವಾಗುತ್ತದೆ ಎಂದು ಸರಕಾರ ಹೇಳುತ್ತದೆ. ಆದರೆ, ಕಾಯ್ದೆ ಅಂಗೀಕಾರವಾಗಿ ಹಲವು ತಿಂಗಳು ಕಳೆದರೂ, ಬೆಳೆಗಾರರ ಆದಾಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಬದಲಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಉಪಕರಣ, ಇಂಧನ ದರ ಜಾಸ್ತಿಯಾಗಿದೆ. ದೇಶದ ಆರ್ಥಿಕತೆಯ ಮೂಲವಾಗಿರುವ ರೈತರನ್ನು ಸಂಕಷ್ಟಕ್ಕೆ ಈ ಕಾಯ್ದೆ ದೂಡಲಿದೆ. ಇದರಿಂದ ಕಾರ್ಮಿಕರಿಗೂ ಸಂಕಷ್ಟ ಉಂಟಾಗಲಿದೆ ಎಂದು ತಿಳಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರ ಮೈನ ಮಾತನಾಡಿ, ಕೇಂದ್ರ ಜನವಿರೋಧಿ ನೀತಿ ಅನುಸರಿಸುತ್ತಿದೆ. ರೈತರ ಹೋರಾಟಕ್ಕೆ ಎಲ್ಲರ ಬೆಂಬಲ ಬೇಕೆಂದು ಮನವಿ ಮಾಡಿದರು.

ಜೆ.ಡಿ.ಎಸ್. ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಖ್ ಖಾನ್ ಮಾತನಾಡಿ, ರೈತಪರ ಸರಕಾರ ಎಂದು ಹೇಳಿಕೊಂಡ ಅಧಿಕಾರಕ್ಕೆ ಬಂದವರು ಇಂದು ರೈತರ ಬದುಕನ್ನು ಅತಂತ್ರಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡಿದರೆ ಅಂತವರನ್ನು ಬಂಧನ ಮಾಡಲಾಗುತ್ತಿದೆ. ಈ ದಬ್ಬಾಳಿಕೆಯ ವಿರುದ್ಧ ದೇಶ ತಿರುಗಿ ಬೀಳಲಿದೆ ಎಂದರು.

ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿ ಅಧ್ಯಕ್ಷ ಅಮೀನ್ ಮೊಹ್ಸಿನ್ ಮಾತನಾಡಿ, ರೈತರ ಹೋರಾಟ ಹತ್ತಿಕುವುದು ಅಸಾಧ್ಯ ವಾಗಿದೆ. ಬಂಡವಾಳಶಾಹಿಗಳ ಕುತಂತ್ರ ದಿಂದ ಮಸೂದೆ ಅಂಗೀಕಾರವಾಗಿದೆ. ಉದ್ಯಮಿಗಳ ಪರ ನಿಯಮ ಜಾರಿ ಯಾಗಿದೆ. ಹೀಗಾಗಿ ರೈತ ವಿರೋಧಿ ಮಸೂದೆಗಳನ್ನು ಕೈಬಿಡುವಂತೆ ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ, ಕಾಂಗ್ರೆಸ್, ಜೆಡಿಎಸ್, ಎಸ್.ಡಿ.ಪಿ.ಐ,, ಕಮ್ಯುನಿಸ್ಟ್ ಪಕ್ಷ, ದಲಿತ ಸಂಘಟನೆಗಳು, ಆಮ್‌ಆದ್ಮಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದವು. ರೈತ ಸಂಘದ ಮುಖಂಡರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಚೆಟ್ರುಮಾಡ ಸುಜಯ್ ಬೋಪಯ್ಯ, ಇಟ್ಟಿರ ಸಬಿತ, ಅಜ್ಜಮಾಡ ಚಂಗಪ್ಪ, ಆಲೆಮಾಡ ಮಂಜುನಾಥ್, ಮೇಚಂಡ ಕಿಶಮಾಚಯ್ಯ, ಬಾಚಮಾಡ ಭವಿಕುಮಾರ್, ಚಟ್ಟಂಗಡ ಕಂಬ ಕಾರ್ಯಪ್ಪ, ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಕವಿತರಾಮ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕಾರ್ಮಿಕ ಮುಖಂಡ ನಿರ್ವಾಣಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

ಅಂಗಡಿ ಮುಚ್ಚಿಸಿದ ಪ್ರತಿಭಟನಾನಿರತರು

ಪ್ರತಿಭಟನೆ ಆರಂಭಕ್ಕೂ ಮುನ್ನ ಹೋರಾಟಗಾರರು ಮಡಿಕೇರಿಯ ಮಾರುಕಟ್ಟೆ, ಮಹದೇವಪೇಟೆ ರಸ್ತೆಯಲ್ಲಿ ಅಂಗಡಿ ಮುಚ್ಚುವಂತೆ ಮನವಿ ಮಾಡುತ್ತಿದ್ದರು. ಮನವಿ ಹಿನ್ನೆಲೆ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಕೆಲವು ವರ್ತಕರು ಮುಚ್ಚಿದರು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ವೆಂಕಟೇಶ್, ಬಲವಂತ ವಾಗಿ ಏಕೆ ಅಂಗಡಿ ಮುಚ್ಚಿಸುತ್ತಿದ್ದೀರ ಎಂದು ಪ್ರಶ್ನಿಸಿದರು. ಇದರಿಂದ ಪ್ರತಿಭಟನಾನಿರತರು ಹಾಗೂ ಪೊಲೀಸರ ನಡುವೆ ವಾಗ್ವಾದ ಸೃಷ್ಟಿಯಾಯಿತು.

ನಾವು ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಬಲವಂತ ಮಾಡುತ್ತಿಲ್ಲ ಎಂದು ಪ್ರತಿಭಟನಾನಿರತರು ಹೇಳಿದರು. ನಂತರ ಕಾಲ್ನಡಿಗೆ ಮೂಲಕ ತೆರಳಿ ಅಂಗಡಿ ಮುಚ್ಚುವಂತೆ ಮನವಿ ಮಾಡಿದರು. ಕೆಲ ವರ್ತಕರು ಅಂಗಡಿ ಮುಚ್ಚುವುದಿಲ್ಲ ಎಂದು ಪ್ರಟಿಭಟನಾಕಾರರ ವಿರುದ್ಧ ಹರಿಹಾಯ್ದರು.

ಬಂಧನ - ಬಿಡುಗಡೆ

ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದಾರೆ ಎಂದು ಪೊಲೀಸರು ಅಮೀನ್ ಮೊಹ್ಸಿನ್ ಹಾಗೂ ತೆನ್ನೀರ ಮೈನಾ ಅವರುಗಳನ್ನು ಬಂಧಿಸಿದರು. ಠಾಣೆಗೆ ಕರೆದೊಯ್ದು ಬಳಿಕ ಪೊಲೀಸರು ಇಬ್ಬರನ್ನು ಬಿಡುಗಡೆಗೊಳಿಸಿದರು.