ಕುಶಾಲನಗರ, ಸೆ. ೨೭: ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಜಾಗದಲ್ಲಿ ರೂ. ೫ ಕೋಟಿ ಅನುದಾನದಲ್ಲಿ ಜವಳಿ, ಖಾದಿ ಮತ್ತು ಗ್ರಾಮೋದ್ಯೋಗ ಹಾಗೂ ಟೈಲರಿಂಗ್ ಸೇರಿದಂತೆ ಇತರೆ ಕೈಗಾರಿಕೆಗಳ ಸ್ಥಾಪನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಯೋಜನೆಗಳನ್ನು ಕಾರ್ಯಗತಗೊಳಿಸಲು ಬೆಂಗಳೂರಿಗೆ ಹೋಗಿ ಬರಲು ಜೊತೆಗೆ ಅಧಿಕಾರಿಗಳಿಗೂ ಹಣ ಖರ್ಚು ಮಾಡಿದ್ದೇನೆ. ಈ ಹಣವನ್ನು ಭರಿಸುವವರು ಯಾರೆಂದು ಸೊಸೈಟಿಯ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಎಸ್.ಎನ್. ರಾಜಾರಾವ್ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿಯಲ್ಲಿ ತನ್ನ ಅಧಿಕಾರ ಅವದಿಯಲ್ಲಿ ಯಾವುದೇ ಹಣ ದುರುಪಯೋಗ ಆಗಿಲ್ಲ ಎಂದರು.
ಲ್ಯಾಂಪ್ಸ್ ಸೊಸೈಟಿಯಲ್ಲಿ ಹಣ ದುರುಪಯೋಗವಾಗಿದೆ ಎಂದು ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕ ಅಪ್ಪಚ್ಚುರಂಜನ್ ಪ್ರಸ್ತಾಪಿಸಿದ್ದಾರೆ. ಸಹಕಾರ ಸಚಿವರು ಕೂಡ ಹಣ ವಸೂಲಾತಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ. ಶಾಸಕರಿಗೆ ಸರಿಯಾದ ಮಾಹಿತಿ ಇಲ್ಲ. ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ. ಚಂದ್ರು ಹಾಗೂ ಕೆಲವು ಸದಸ್ಯರು ಶಾಸಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಹಣ ದುರುಪಯೋಗದ ಆರೋಪ ಮಾಡುತ್ತಿದ್ದಾರೆ ಎಂದು ರಾಜಾರಾವ್ ಹೇಳಿದರು.
ಸೊಸೈಟಿ ಹಣ ದುರುಪಯೋಗ ಆಗಿದೆ ಎಂಬ ಬಗ್ಗೆ ದಾಖಲೆಗಳಿದ್ದರೆ ಈ ಕೂಡಲೇ ಸಹಕಾರ ಕಾಯ್ದೆ ೬೪ರ ಅಡಿಯಲ್ಲಿ ತನಿಖೆಗೆ ಒಳಪಡಿಸಲಿ. ಆಗ ನೈಜ ಸತ್ಯಾಂಶ ತಿಳಿಯಲಿದೆ ಎಂದು ಒತ್ತಾಯಿಸಿದರು. ೨೦೧೮-೧೯ನೇ ಅವದಿಯಲ್ಲಿ ಅರಣ್ಯ ಕಿರುಉತ್ಪನ್ನಗಳ ಸಂಗ್ರಹ ಹಾಗೂ ಮಾರಾಟಕ್ಕಾಗಿ ರೂ.೨೦ ಲಕ್ಷ ಹಣವನ್ನು ಮುಂಗಡವಾಗಿ ಪಡೆಯಲಾಗಿತ್ತು. ಈ ಸಂದರ್ಭ ಸೀಗೆಕಾಯಿಗೆ ಒಂದು ಕೆಜಿಗೆ ರೂ. ೫೦ ರಿಂದ ೬೦ ನೀಡಲಾಗಿದೆ. ಜೊತೆಗೆ ಗಿರಿಜನರು ಅನಾರೋಗ್ಯ ಪೀಡಿತರಾಗಿದ್ದ ವೇಳೆ ಹಾಗೂ ಮೃತಪಟ್ಟ ಗಿರಿಜನ ಕುಟುಂಬಗಳಿಗೆ ೨ ರಿಂದ ೩ ಸಾವಿರ ಪರಿಹಾರ ಧನವನ್ನು ನೀಡಿದ್ದೇನೆ.
ರೂ. ೨೫ ಲಕ್ಷ ವೆಚ್ಚದ ಕಟ್ಟಡ ಕಾಮಗಾರಿ ನಡೆಸಲಾಗಿದ್ದು, ಕೇವಲ ೨೦ ಲಕ್ಷ ಬಿಡುಗಡೆಯಾಗಿದೆ. ಬಾಕಿ ರೂ. ೫ ಲಕ್ಷ ಹಣ ಇನ್ನಷ್ಟೇ ಬರಬೇಕಾಗಿದೆ. ಹಾಲಿ ಕಚೇರಿ ಕಟ್ಟಡ ಮೇಲ್ಬಾಗದಲ್ಲಿ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ಮಾಡಲಾಗಿದ್ದು, ಇದರ ವೆಚ್ಚ ರೂ. ೩ ಲಕ್ಷ ಹಾಗೂ ಸೀಗೆಕಾಯಿ ಬಾಕಿ ರೂ. ೨ ಲಕ್ಷ ಹಣ ಸೇರಿದಂತೆ ಒಟ್ಟು ೧೦ ಲಕ್ಷ ಹಣ ಸೊಸೈಟಿಯಿಂದ ತನಗೆ ಬರಬೇಕಾಗಿದೆ. ಈ ಪ್ರಕಾರವಾಗಿ ನೋಡಿದರೆ ಅರಣ್ಯ ಕಿರುಉತ್ಪನ್ನಗಳಿಗೆ ಸಂಗ್ರಹಕ್ಕೆ ಪಡೆದ ಹಣದಲ್ಲಿ ರೂ. ೧೦ ಲಕ್ಷ ಪಾವತಿಸಬೇಕಾಗುತ್ತದೆ. ಮತ್ತೆ ಕಿರುಉತ್ಪನ್ನ ಸಂಗ್ರಹ ಮತ್ತು ಮಾರಾಟಕ್ಕೆ ಅವಕಾಶ ನೀಡಿದರೆ ಅದರಲ್ಲಿ ಬರುವ ಲಾಭಾಂಶದಲ್ಲಿ ಬಾಕಿ ಹಣವನ್ನು ಪಾವತಿಸಲು ಸಿದ್ಧನಿದ್ದೇನೆ ಎಂದರು. ಕಳೆದ ಆಡಳಿತ ಮಂಡಳಿಯಲ್ಲಿ ನಾಮನಿರ್ದೇಶಿತ ಸದಸ್ಯರಾಗಿದ್ದ ಚಂದ್ರು ಅವರೇ ಸೀಗೆ ಸಂಗ್ರಹಕ್ಕೆ ಮುಂಗಡ ಹಣ ಪಡೆದು ವ್ಯಾಪಾರ ನಡೆಸುವಂತೆ ಸಲಹೆ ನೀಡಿದ್ದರು. ಆದರೆ ಈಗ ಅವರೇ ಶಾಸಕರಿಗೆ ಹಣ ದುರುಪಯೋಗ ವಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ.
ಸೊಸೈಟಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆಯಾಗಲಿ. ನಾನು ಕೂಡ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇಲ್ಲದೆ ಹೋದರೆ ಕಾನೂನು ಹೋರಾಟಕ್ಕೆ ಸಿದ್ಧನಿದ್ದೇನೆ ಎಂದು ರಾಜಾರಾವ್ ಹೇಳಿದರು.
ಗೋಷ್ಠಿಯಲ್ಲಿ ಲ್ಯಾಂಪ್ಸ್ ಸೊಸೈಟಿ ಮಾಜಿ ನಿರ್ದೇಶಕರಾದ ಜೆ.ಟಿ. ಕಾಳಿಂಗ, ಎಚ್.ಎಸ್. ಸವಿತಾ ಇದ್ದರು.