ಕಣಿವೆ : ಕಳೆದ ಜುಲೈ ತಿಂಗಳ ಆರಿದ್ರಾ ಹಾಗೂ ಪುನರ್ವಸು ಮಳೆಯ ಸಮಯದಲ್ಲಿ ರೈತರು ಕೈಗೊಂಡಿದ್ದ ಅಲ್ಪಾವಧಿಯ ಮುಸುಕಿನ ಜೋಳದ ಬೆಳೆಯ ಫಸಲು ಇದೀಗ ಕಟಾವಿಗೆ ಬಂದು ನಿಂತಿದೆ. ಆದರೆ ಕೈಗೆ ಬಂದ ಬೆಳೆಯನ್ನು ಕಟಾವು ಮಾಡಲು ಇದೀಗ ತಾ. ೨೭ ರ ಸೋಮವಾರದಿಂದ ಹುಟ್ಟಿದ ಹಸ್ತ ಮಳೆ ಅಡ್ಡಿಯಾಗಿದೆ.

ಕುಶಾಲನಗರ ತಾಲೂಕಿನ ಅರೆ ನೀರಾವರಿ ಪ್ರದೇಶದ ಅತ್ತೂರು, ಹಾರಂಗಿ, ಯಡವನಾಡು, ಮಾದಾಪಟ್ಟಣ, ಗೊಂದಿಬಸವನಹಳ್ಳಿ, ಕೊಪ್ಪಾ, ಚಿಕ್ಕಹೊಸೂರು, ಚಿಕ್ಕತ್ತೂರು, ಸಿದ್ಧಲಿಂಗಪುರ, ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಎಕರೆ ಭೂ ಪ್ರದೇಶಗಳಲ್ಲಿ ರೈತರು ಕೈಗೊಂಡಿದ್ದ ಮುಸುಕಿನ ಜೋಳದ ಫಸಲನ್ನು ಹೊಲದಲ್ಲೇ ಬಿಡುವಂತಹ ದುಸ್ಥಿತಿ ಎದುರಾಗಿದೆ. ಇನ್ನು ಕಾಡಾನೆಗಳ ಹಾವಳಿಯಿಂದ ನಲುಗಿ ಹೋಗಿರುವ ಅರಣ್ಯದಂಚಿನ ಗ್ರಾಮಗಳ ಕೃಷಿಕರು ಕಾಡಾನೆಗಳು ತಿಂದು ತುಳಿದು ಉಳಿಸಿರುವ ಅಲ್ಪ ಸ್ವಲ್ಪ ಪ್ರಮಾಣದ ಜೋಳದ ಫಸಲನ್ನು ಮಾರುಕಟ್ಟೆಗೆ ಸಾಗಿಸುವ ಚಿಂತನೆಯಲ್ಲಿದ್ದ ಸಂದರ್ಭದಲ್ಲಿ ಹನಿ ಮಳೆಯಾಗಿ ಬಾಧಿಸುತ್ತಿರುವ ಹಸ್ತ ಮಳೆ ವಿಶೇಷವಾಗಿ ಜೋಳದ ಕೃಷಿಕರಿಗೆ ಭೀತಿಯನ್ನು ಮೂಡಿಸಿದೆ.

ಒಂದೆರಡು ದಿನ ಮಳೆ ಬಂದು ಹೋದರೆ ಸರಿ. ವಾರಗಟ್ಟಲೇ ಏನಾದರೂ ಹಸ್ತ ಮಳೆ ಪಿರಿ ಪಿರಿಯಾಗಿ ಕಾಡಿದರೆ ಕಟಾವಿಗೆ ಬಂದು ನಿಂತ ಹೊಲದಲ್ಲಿನ ಜೋಳದ ಗಿಡದಲ್ಲಿ ಹಾಗೂ ಜೋಳದ ಮಾತೆಗಳನ್ನು ಕಟಾವು ಮಾಡಿ ಸಂಗ್ರಹಣೆ ಮಾಡಿಟ್ಟ ಜಾಗದಲ್ಲಿ ಮಳೆಯ ನೀರಿನ ಶೀತಾಂಶಕ್ಕೆ ಮೊಳಕೆ ಬರುವ ಅಪಾಯದ ಆತಂಕ ರೈತರನ್ನು ಆವರಿಸಿದೆ.

ಹಸ್ತ ಮಳೆ ಅಕ್ಟೋಬರ್ ತಿಂಗಳ ೯ ನೇ ತಾರೀಖಿನವರೆಗೂ ಇದೆ. ಹಾಗಾಗಿ ‘ಹಸ್ತ' ತಾನು ಉದಯಿಸಿದ ಮೊದಲ ದಿನವೇ ಜೋಳದ ಕೃಷಿಕರಿಗೆ ಆತಂಕ ತಂದಿದೆ.

- ಮೂರ್ತಿ