ಮಡಿಕೇರಿ, ಸೆ. ೨೭: ಸುಮಾರು ರೂ. ೪೦೦ ಕೋಟಿ ವೆಚ್ಚದಲ್ಲಿ ಅಮರ ಸೇನಾನಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಜೀವನಾಧರಿತ ಸಿನಿಮಾ ತಯಾರಾಗಲಿದ್ದು, ಈಗಾಗಲೇ ಈ ಸಂಬAಧ ಫೀ.ಮಾ.ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆಯಲಾಗಿದೆ ಎಂದು ಸಿನಿಮಾ ತಂಡ ಹೇಳಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡದ ಖ್ಯಾತ ನಟ ‘ಲವ್ಲಿ ಸ್ಟಾರ್’ ಪ್ರೇಮ್, ಕೊಡಗು ಸೈನಿಕರ ನಾಡು. ಫೀ.ಮಾ.ಕಾರ್ಯಪ್ಪ ಅವರು ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದವರು. ಅವರ ಸಾಧನೆಯನ್ನು ಇಡೀ ಪ್ರಪಂಚಕ್ಕೆ ತೋರಿಸುವ ಸಲುವಾಗಿ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಸಿನಿಮಾ ತಯಾರಾಗಲಿದೆ. ಸದ್ಯಕ್ಕೆ ಕಾರ್ಯಪ್ಪ ಅವರ ಪುತ್ರ ನಂದಾ ಕಾರ್ಯಪ್ಪ ಅವರೊಂದಿಗೆ ಚರ್ಚಿಸಿ ಸಲಹೆಗಳನ್ನು ಪಡೆದಿದ್ದೇವೆ ಎಂದ ಅವರು, ಕಾರ್ಯಪ್ಪ ಅವರ ಪಾತ್ರ ಮಾಡಲು ಬಹಳ ಖುಷಿ ತಂದಿದೆ. ಅವರ ರೀತಿ ಪಾತ್ರ ಮಾಡಲು ಪೂರ್ವ ತಯಾರಿ ಮಾಡುತ್ತೇನೆ. ಸಂಪೂರ್ಣ ಶ್ರಮ ಹಾಕಿ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಸಿನಿಮಾ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಫೀ.ಮಾ.ಕಾರ್ಯಪ್ಪ ಅವರ ಹೆಸರಿನಲ್ಲಿ ಅನೇಕ ರಸ್ತೆ, ವೃತ್ತಗಳಿವೆ.

(ಮೊದಲ ಪುಟದಿಂದ) ಆದರೆ, ಅದಕ್ಕೆ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿರ್ದೇಶಕ ರಾಘವೇಂದ್ರ ಮಾತನಾಡಿ, ಚಿತ್ರ ಇದೀಗ ಪ್ರಥಮ ಹಂತದಲ್ಲಿದ್ದು, ಅದ್ಧೂರಿ ವೆಚ್ಚವಾಗಿರುವುದರಿಂದ ಸಿನಿಮಾ ಬಿಡುಗಡೆಯಾಗಲು ೨ ವರ್ಷಗಳು ಬೇಕಾಗಿವೆ. ಸಿನಿಮಾವನ್ನು ಸೈನಿಕರಿಗೆ ಅರ್ಪಣೆ ಮಾಡಲಾಗಿದೆ ಎಂದರು.

ನಿರ್ಮಾಪಕ ಅರುಣ್ ಪ್ರದೀಪ್ ಮಾತನಾಡಿ, ಕನ್ನಡ ಸಿನಿಮಾದಲ್ಲಿ ಇದೊಂದು ದೊಡ್ಡ ಸಾಹಸವಾಗಿದೆ. ಕಾರ್ಯಪ್ಪ ಅವರ ಜೀವನಚರಿತ್ರೆಯನ್ನು ತೆರೆ ಮೇಲೆ ತರಲು ಖುಷಿ ಇದೆ. ಉತ್ತಮವಾಗಿ ಚಿತ್ರ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸಿನಿಮಾ ಛಾಯಾಗ್ರಾಹಕ ನವೀನ್ ಕುಮಾರ್, ವಿತರಕ ಆನಂದ್ ಹಾಜರಿದ್ದರು.