ಬೆಂಗಳೂರಿನಲ್ಲಿ ೩ ಅಂತಸ್ತಿನ ಕಟ್ಟಡ ಕುಸಿತ

ಬೆಂಗಳೂರು, ಸೆ. ೨೮: ವಿಲ್ಸನ್ ಗಾರ್ಡನ್ ಸಮೀಪದ ಲಕ್ಕಸಂದ್ರದಲ್ಲಿ ನಿನ್ನೆ ೩ ಅಂತಸ್ತಿನ ಮನೆ ಕುಸಿದು ಬಿದ್ದ ಅರ್ಧ ಕಿಲೋಮೀಟರ್ ಮುಂದೆ ಕೆಎಂಎಫ್ ಕ್ವಾರ್ಟರ್ಸ್ನೊಳಗಿರುವ ೫೦ ವರ್ಷದ ಕಟ್ಟಡ ಬಮೂಲ್ ನೌಕರರು ನೆಲೆಸಿರುವ ಮೂರು ಅಂತಸ್ತಿನ ಕಟ್ಟಡ ಇಂದು ಬೆಳಿಗ್ಗೆ ೯.೩೦ರ ಸುಮಾರಿಗೆ ಕುಸಿದುಬಿದ್ದಿದೆ. ಕಟ್ಟಡ ಕುಸಿಯುತ್ತಿದ್ದಂತೆ ವಸ್ತುಗಳನ್ನೆಲ್ಲಾ ಬಿಟ್ಟು ಪ್ರಾಣರಕ್ಷಣೆಯ ಕಾಳಜಿಯಿಂದ ನಿವಾಸಿಗಳೆಲ್ಲರೂ ಓಡಿ ಹೊರ ಬಂದಿದ್ದರಿAದ ಭಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು, ಬಿಬಿಎಂಪಿ ಸಿಬ್ಬಂದಿ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ದುರಂತದಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಕಟ್ಟಡ ಕುಸಿತದ ವೇಳೆ ಸಿಕ್ಕಿಬಿದ್ದಿದ್ದ ಎರಡು ಶ್ವಾನಗಳನ್ನು ರಕ್ಷಿಸಲಾಗಿದೆ. ಈ ಕಟ್ಟಡ ಬಿರುಕು ಬಿಡುವ ಸ್ಥಿತಿಯಲ್ಲಿದೆ, ಕಳಪೆಯಾಗಿದೆ ಎಂದು ನಿವಾಸಿಗಳು ಈ ಹಿಂದೆಯೇ ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದೇ ಇಂದಿನ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕಟ್ಟಡ ಕುಸಿತ ಕಂಡು ಅಕ್ಕಪಕ್ಕದವರೂ ಕೂಡ ಭಯದಿಂದ ತಮ್ಮ ಮನೆ ತೊರೆದಿದ್ದಾರೆ.

ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ಎಸ್.ಎಂ. ಕೃಷ್ಣ

ಮೈಸೂರು, ಸೆ. ೨೮: ಮೈಸೂರು ದಸರಾ ೨೦೨೧ರ ಉದ್ಘಾಟಕರ ಹೆಸರು ಅಂತಿಮವಾಗಿದೆ. ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ದಸರಾ ಉದ್ಘಾಟಿಸಲಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್.ಎಂ. ಕೃಷ್ಣ (೮೯) ಹೆಸರನ್ನು ಅಂತಿಮಗೊಳಿಸಲಾಗಿದೆ. ಅಕ್ಟೋಬರ್ ೭ ರಿಂದ ೧೫ ರ ತನಕ ಈ ಬಾರಿಯ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ಕೋವಿಡ್ ಕಾರಣದಿಂದಾಗಿ ಸರಳವಾಗಿ ದಸರಾ ನಡೆಯಲಿದ್ದು, ಅಕ್ಟೋಬರ್ ೧೫ ರಂದು ಜಂಬೂ ಸವಾರಿ ಸಹ ಅರಮನೆ ಆವರಣದಲ್ಲಿ ಮಾತ್ರ ನಡೆಯಲಿದೆ. ಅಕ್ಟೋಬರ್ ೭ ರಂದು ಬೆಳಿಗ್ಗೆ ೮.೧೫ ರಿಂದ ೮.೪೫ರ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ ೨೦೨೧ನೇ ಸಾಲಿನ ದಸರಾವನ್ನು ಉದ್ಘಾಟನೆ ಮಾಡಲಾಗುತ್ತದೆ. ಅರಮನೆ ಆವರಣದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯುವ ದಸರಾ, ದಸರಾ ಆಹಾರ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ರದ್ದಾಗಿವೆ.

ಸುರಂಗ ಮಾರ್ಗದ ಕಾಮಗಾರಿ ಶೀಘ್ರವೇ ಅಂತ್ಯ: ನಿತಿನ್ ಗಡ್ಕರಿ

ಶ್ರೀನಗರ, ಸೆ. ೨೮: ಭಾರತದ ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಗಡಿಯಲ್ಲಿ ನಿರ್ಮಾಣವಾಗಿರುವ ಏಷ್ಯಾದ ಅತಿ ಉದ್ದದ ಝೊಜಿಲಾ ಸುರಂಗಮಾರ್ಗದ ಕಾಮಗಾರಿಯನ್ನು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಪರಿಶೀಲನೆ ನಡೆಸಿದರು. ಕಾರ್ಗಿಲ್ ಜಿಲ್ಲೆಯಲ್ಲಿ ಸುಮಾರು ರೂ. ೨,೩೦೦ ಕೋಟಿ ವೆಚ್ಚದಲ್ಲಿ ಈ ಝೊಜಿಲಾ ಸುರಂಗಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಥಳಕ್ಕೆ ಭೇಟಿ ನೀಡಿದ್ದು ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ನಿತಿನ್ ಗಡ್ಕರಿ ಡಿಸೆಂಬರ್ ೨೦೨೩ ರೊಳಗೆ ಈ ಕಾಮಗಾರಿ ಸಂಪೂರ್ಣಗೊಳಿಸಬೇಕು ಎಂದು ಈ ಕಾಮಗಾರಿಯ ಉಸ್ತುವಾರಿ ವಹಿಸಿರುವ ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿAಗ್ ಕಂಪೆನಿಗೆ ಸೂಚನೆ ನೀಡಿದ್ದಾರೆ. ಈ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡ ಬಳಿಕ ಚಳಿಗಾಲದಲ್ಲಿ ಹಿಮಪಾತವಿರುವ ಸಂದರ್ಭದಲ್ಲಿ ಶ್ರೀನಗರದಿಂದ ಲೇಹ್ ಖಡಾಖ್ ಹೆದ್ದಾರಿ ಬಂದ್ ಆಗುವುದಿಲ್ಲ. ವರ್ಷಪೂರ್ತಿ ಜನರು ಈ ಮಾರ್ಗದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತದೆ. ಇನ್ನು ಈ ಕಾಮಗಾರಿಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಈ ಸುರಂಗ ಮಾರ್ಗದ ಕಾಮಗಾರಿಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲಾಗುತ್ತದೆ. ಕಾಮಗಾರಿಯನ್ನು ನೋಡಿಕೊಳ್ಳುತ್ತಿರುವ ಸಂಸ್ಥೆಗೆ ಡಿಸೆಂಬರ್ ೨೦೨೩ ರೊಳಗೆ ಈ ಕಾಮಗಾರಿ ಸಂಪೂರ್ಣಗೊಳಿಸಬೇಕು ಎಂದು ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.