ಚೆಟ್ಟಳ್ಳಿ, ಸೆ. ೨೮: ಚೆಟ್ಟಳ್ಳಿ - ಅಬ್ಯಾಲ ಮುಖ್ಯ ರಸ್ತೆಯ ಬದಿ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು ವಾಹನ ಸವಾರರು ಎಚ್ಚರಿಕೆಯಿಂದ ತೆರಳಬೇಕಾಗಿದೆ.
ಕಳೆದ ಒಂದು ವರ್ಷದ ಹಿಂದೆ ಸುರಿದ ಮಳೆಯಿಂದಾಗಿ ಚೆಟ್ಟಳ್ಳಿ-ಕತ್ತಲೆಕಾಡು ರಸ್ತೆಯೆಲ್ಲ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತು. ನಂತರ ರಸ್ತೆಯಲ್ಲಿ ಮಣ್ಣನೆಲ್ಲಾ ತೆರವುಗೊಳಿಸಿ ತಾತ್ಕಾಲಿಕವಾಗಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಬಳಿಕ ರಸ್ತೆಯ ಬದಿಗೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಯಿತು. ಹೆಚ್ಚಿನ ಕಡೆ ತಡೆಗೋಡೆ ಕಾಮಗಾರಿ ಮುಗಿದರು. ನಿರಂತರ ಸುರಿವ ಮಳೆಯಿಂದಾಗಿ ಇನ್ನೂ ಕೆಲವೆಡೆ ತಡೆಗೋಡೆಯ ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದೆ.
ಚೆಟ್ಟಳ್ಳಿ ಸಮೀಪದ ಅಭ್ಯಾಲದ ಬಳಿ ತಡೆಗೋಡೆ ಕಾಮಗಾರಿ ಪ್ರಸ್ತುತ ನಡೆಯುತ್ತಿರುವುದರಿಂದ ರಸ್ತೆಯ ಬದಿಯ ಮಣ್ಣನೆಲ್ಲಾ ಕೊರೆದು ತೆಗೆಯಲಾಗಿದ್ದು ಮುಖ್ಯ ರಸ್ತೆಯ ಬದಿಯಲ್ಲೆ ಸುರಿಯಲಾಗಿದೆ. ಇದರಿಂದ ಎರಡು ಕಡೆಯಿಂದ ವಾಹನಗಳು ತೆರಳುವಾಗ ಅಪಾಯವಿದ್ದು, ವಾಹನ ಸವಾರರು ಎಚ್ಚರವಹಿಸಬೇಕಿದೆ.
-ಕರುಣ್ ಕಾಳಯ್ಯ