ಮಡಿಕೇರಿ, ಸೆ. ೨೫: ರೈತಪರ ಕಾಳಜಿಯಿಂದ ವಿವಿಧ ಸಂಘಟನೆಗಳು ತಾ. ೨೭ ರಂದು ಭಾರತ ಬಂದ್ಗೆ ಕರೆ ನೀಡಿದ್ದು, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹೋರಾಟಕ್ಕೆ ಬೆಂಬಲ ಸೂಚಿಸುತ್ತದೆ. ಆದರೆ ನಷ್ಟದ ನಡುವೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವುದಾಗಿ ಚೇಂಬರ್ ಜಿಲ್ಲಾಧ್ಯಕ್ಷ ಎಂ.ಬಿ.ದೇವಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ನವೀನ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಮತ್ತು ಕೋವಿಡ್ ಸಂದಿಗ್ಧ ಪರಿಸ್ಥಿತಿಯಿಂದ ನಿರಂತರವಾಗಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಾಕಷ್ಟು ಕಷ್ಟ, ನಷ್ಟಗಳಿಗೆ ಸಿಲುಕಿದ್ದಾರೆ. ಆದ್ದರಿಂದ ಸೋಮವಾರ ಬಂದ್ ಬದಲು ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ದೇಶದ ಅನ್ನದಾತರಾಗಿರುವ ರೈತರ ಬಗ್ಗೆ ವರ್ತಕರಿಗೆ ಅಪಾರ ಗೌರವವಿದೆ. ಆದರೆ ವರ್ತಕ ಸಮುದಾಯ ಕೂಡ ನಷ್ಟದಲ್ಲಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.