ಗೋಣಿಕೊಪ್ಪಲು, ಸೆ. ೨೫: ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆಯ ಕೀರೆ ಹೊಳೆಯಲ್ಲಿ ಅನಾಥವಾಗಿ ಬಿದ್ದಿದ್ದ ಲಕ್ಷಾಂತರ ಮೌಲ್ಯದ ಹೈಮಾಸ್ಟ್ ಕಂಬವನ್ನು ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಕ್ರೆನ್ ಸಹಾಯದಿಂದ, ಇದನ್ನು ಹೊಳೆಯಿಂದ ತೆಗೆದು ಪೌರ ಕಾರ್ಮಿಕರು ಪಂಚಾಯಿತಿ ಟ್ರಾö್ಯಕ್ಟರ್ ಮೂಲಕ ಸುರಕ್ಷಿತವಾಗಿ ಪಂಚಾಯಿತಿಯ ಗೋದಾಮಿನಲ್ಲಿ ಇರಿಸಿದ್ದಾರೆ.
೨೦೧೫-೧೬ನೇ ಸಾಲಿನಲ್ಲಿ ಆಗಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚೋಡುಮಾಡ ಶರೀನ್‌ಸುಬ್ಬಯ್ಯನವರು ವಿಶೇಷ ಆಸಕ್ತಿ ವಹಿಸಿ ತಮ್ಮ ಅಧಿಕಾರವಧಿಯಲ್ಲಿ ನಗರಕ್ಕೆ ವಿಶೇಷ ಕೊಡುಗೆ ನೀಡುವ ಮೂಲಕ ಬೈಪಾಸ್ ರಸ್ತೆ ಜಂಕ್ಷನ್‌ನಲ್ಲಿ ಈ ಬೃಹತ್ ಹೈಮಾಸ್ಟ್ ಲೈಟ್‌ಅನ್ನು ಅಳವಡಿಸಿದ್ದರು. ಇದರಿಂದ ರಾತ್ರಿಯ ವೇಳೆ ನಾಗರಿಕರಿಗೆ ನಡೆದಾಡಲು ಹಾಗೂ ವಾಹನ ಸಂಚಾರರಿಗೆ ಅನುಕೂಲವಾಗಿತ್ತು. ಮುಂಜಾನೆಯ ವಾಯು ವಿಹಾರಕ್ಕೆ ತೆರಳುವ ಮಹಿಳೆಯರು, ಮಕ್ಕಳಿಗೂ, ಅನುಕೂಲವಾಗಿತ್ತು. ಸುತ್ತ ಮುತ್ತಲಿನಲ್ಲಿ ಈ ಹೈಮಾಸ್ಟ್ನಿಂದ ಉತ್ತಮ ಬೆಳಕು ಸಿಗುವಂತಾಗಿತ್ತು.
ಕಳೆದ ಆರು ತಿಂಗಳ ಹಿಂದೆ ಪೊನ್ನಂಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಬೈಪಾಸ್ ಜಂಕ್ಷನ್ ಬಳಿ ಇರುವ ಕಿರಿದಾದ ಸೇತುವೆಯನ್ನು ಆಗಲೀಕರಣಗೊಳಿಸುವ ಸಂದರ್ಭ ಇಲ್ಲಿದ್ದ ಹೈಮಾಸ್ಟ್ ಲೈಟ್‌ಅನ್ನು ತೆಗೆದು ಸೇತುವೆಯ ಕಾಮಗಾರಿ ಕೈಗೊಂಡಿದ್ದರು.ಈ ವೇಳೆ ಹೈಮಾಸ್ಟ್ ಕಂಬವನ್ನು ತೆಗೆದು ಸಮೀಪವಿರುವ ಕೀರೆ ಹೊಳೆಯ ಬದಿಯಲ್ಲಿ ಇರಿಸಿದ್ದರು. ನಂತರದ ದಿನದಲ್ಲಿ ಈ ಹೈಮಾಸ್ಟ್ ಅನ್ನು ನಿಗದಿತ ಸ್ಥಳದಲ್ಲಿ ಹಾಕಬೇಕಾಗಿತ್ತು. ಆದರೆ ಇದನ್ನು ಕೀರೆ ಹೊಳೆಗೆ ಹಾಕಲಾಗಿತ್ತು. ಈ ಬಗ್ಗೆ ‘ಶಕ್ತಿ’ ಸಮಗ್ರ ವರದಿ ಪ್ರಕಟಿಸಿ ಪಂಚಾಯಿತಿ ಗಮನ ಸೆಳೆದಿತ್ತು.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳ ಪರಿಶೀಲನೆ ನಡೆಸಿ ಕೀರೆಹೊಳೆಯಲ್ಲಿದ್ದ ಹೈಮಾಸ್ಟ್ ಕಂಬವನ್ನು ಸುರಕ್ಷಿತವಾಗಿ ತೆಗೆದು ಕಂಬವನ್ನು ಪಂಚಾಯಿತಿಯ ಗೋದಾಮಿನಲ್ಲಿ ಇಡಲಾಗಿದೆ. ಸದ್ಯದಲ್ಲಿಯೇ ಪಂಚಾಯಿತಿ ಆಡಳಿತ ಮಂಡಳಿಯ ಸಭೆ ಕರೆದು ಹೈಮಾಸ್ಟ್ ಲೈಟ್ ಅನ್ನು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ನಿಗದಿತ ಸ್ಥಳದಲ್ಲಿ ಹೈಮಾಸ್ಟ್ ಅನ್ನು ಅಳವಡಿಸಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷ ಚೈತ್ರಾ ತಿಳಿಸಿದ್ದಾರೆ.
ವರದಿಯ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೈತ್ರ ಬಿ.ಚೇತನ್, ಪಿಡಿಓ ತಿಮ್ಮಯ್ಯನವರು ಪಂಚಾಯಿತಿ ನೌಕರರ ಸಹಾಯದಿಂದ ಸ್ಥಳಕ್ಕೆ ತೆರಳಿ ಹೊಳೆಯಲ್ಲಿ ಬಿದ್ದಿದ್ದ ವಿದ್ಯುತ್ ಕಂಬವನ್ನು ಕ್ರೇನ್ ಮೂಲಕ ಮೇಲೆತ್ತಿ ಪಂಚಾಯಿತಿಯ ಪೌರ ಕಾರ್ಮಿಕರ ಸಹಾಯದಿಂದ ಪಂಚಾಯಿತಿ ಕಟ್ಟಡದ ಗೋದಾಮಿನಲ್ಲಿ ಸುರಕ್ಷಿತವಾಗಿ ಇರಿಸಿದ್ದಾರೆ. ಇದರಿಂದಾಗಿ ಲಕ್ಷಾಂತರ ಮೌಲ್ಯದ ಸರ್ಕಾರದ ಆಸ್ತಿ ಉಳಿಸಿದಂತಾಗಿದೆ.