ಮಡಿಕೇರಿ, ಸೆ. ೨೪ : ಇದು ಹೆದ್ದಾರಿ ಬದಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅರ್ಚಕರು ಪ್ರತಿನಿತ್ಯ ಬೆಳಿಗ್ಗೆ ಸ್ಥಳೀಯ ನಿವಾಸಿಯೊಬ್ಬರಿಗೆ ತಮ್ಮ ಮನೆಯ ಹಸುವಿನ ಹಾಲನ್ನು ತಂದು ಕೊಡುತ್ತಾರೆ. ಹಾಲು ತುಂಬಿದ ಬಾಟಲಿಯನ್ನು ರಸ್ತೆ ಬದಿಯ ಕಾಣಿಕೆ ಹುಂಡಿಯ ಕಟ್ಟೆ ಮೇಲಿಡುತ್ತಾರೆ. ನಂತರ ಹಾಲು ಕೊಂಡುಕೊಳ್ಳುವ ವ್ಯಕ್ತಿ ಬಂದು ತೆಗೆದುಕೊಂಡು ಹೋಗುತ್ತಾರೆ.

ಎಂದಿನAತೆ ಇಂದು ಬೆಳಿಗ್ಗೆ ಅರ್ಚಕರು ಹಾಲನ್ನು ಯಥಾ ಸ್ಥಾನದಲ್ಲಿಟ್ಟು ಪೂಜಾ ಕಾರ್ಯ ನೆರವೇರಿಸಿ ಹಿಂತಿರುಗಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಹಾಲನ್ನು ತೆಗೆದು ಕೊಂಡು ಹೋಗಲೆಂದು ಬಂದ ವ್ಯಕ್ತಿಗೆ ಹಾಲಿನ ಬಾಟಲಿ ಕಾಣಲಿಲ್ಲ. ಅತ್ತಿತ್ತ ತಡಕಾಡಿದರೂ ಪತ್ತೆ ಆಗಲಿಲ್ಲ. ಅರ್ಚಕರಿಗೆ ಮೊಬೈಲಾಯಿಸಿದಾಗ ಹಾಲಿನ ಬಾಟಲಿ ಇಟ್ಟಿದ್ದನ್ನು ಖಾತರಿಪಡಿಸಿದ್ದಾರೆ. ಹೀಗಾಗಿ ಸಿಸಿ ಟಿವಿ ಪರಿಶೀಲಿಸಿದಾಗ ಅಚ್ಚರಿಯ ದೃಶ್ಯಾವಳಿ ಸೆರೆಯಾಗಿದೆ. ಹಾದಿಹೋಕನೊಬ್ಬ ನೇರವಾಗಿ ಹುಂಡಿಯ ಬಳಿ ಬರುತ್ತಾನೆ. ದೇವರಿಗೆ ಕೈ ಮುಗಿಯುತ್ತಾನೆ. ಕಾಣಿಕೆ ಹಾಕುತ್ತಾನೆ. ಮುಲಾಜಿಲ್ಲದೇ ಹಾಲಿನ ಬಾಟಲಿಯನ್ನು ಕದ್ದೊಯ್ಯುತ್ತಾನೆ. ವಿಷಯವರಿತ ಸ್ಥಳೀಯರು ಹೀಗೂ ಉಂಟೇ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

-ಕ್ಯೂಟ್ ಕೂರ್ಗ್ ನ್ಯೂಸ್