ಬೆಂಗಳೂರು, ಸೆ. ೨೫: ಕೊಡಗಿನಲ್ಲಿ ಅಕ್ರಮ-ಸಕ್ರಮದಲ್ಲಿ ಜಿಲ್ಲೆಯಲ್ಲಿ ರೈತರಿಗೆ ನೀಡಲ್ಪಟ್ಟ ಸಾಗುವಳಿ ಚೀಟಿ ಕುರಿತು ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾಹಿತಿ ಬಯಸಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳಲ್ಲಿ ಅಕ್ರಮ-ಸಕ್ರಮದ ಎಷ್ಟು ಜನ ರೈತರಿಗೆ ಸಾಗುವಳಿ ಚೀಟಿಯನ್ನು ನೀಡಲಾಗಿದೆ. ಈ ರೀತಿ ಸಾಗುವಳಿ ಚೀಟಿಯನ್ನು ಪಡೆದ ಎಷ್ಟು ಜನರಿಗೆ ಆರ್.ಟಿ.ಸಿಯನ್ನು ನೀಡಲಾಗಿದೆ. ಇದರಲ್ಲಿ ಯಾವುದಾದರೂ ರೈತರಿಗೆ ಆರ್.ಟಿ.ಸಿ.ಯನ್ನು ರದ್ದುಪಡಿಸಲಾಗಿದೆಯೇ. ಹಾಗಿದ್ದಲ್ಲಿ ಅದಕ್ಕೆ ಕಾರಣಗಳೇನು. ಸಾಗುವಳಿ ಚೀಟಿ ಹಾಗೂ ಆರ್.ಟಿ.ಸಿ.ಗಳನ್ನು ನೀಡಲು ಹೊರಡಿಸಿರುವ ಯಾವುದಾದರೂ ಆದೇಶಗಳನ್ನು ರದ್ದುಪಡಿಸಲಾಗಿದೆಯೇ. ಹಾಗಿದ್ದಲ್ಲಿ ಅದಕ್ಕೆ ಕಾರಣಗಳೇನು? (ವಿವರ ನೀಡುವುದು) ಎಂದು ಸುನಿಲ್ ಸುಬ್ರಮಣಿ ಪ್ರಶ್ನಿಸಿದರು.
ಇದಕ್ಕೆ ರಾಜ್ಯ ಕಂದಾಯ ಸಚಿವರು ಉತ್ತರಿಸಿದರು. ಕೊಡಗು ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳಲ್ಲಿ ಅಕ್ರಮ-ಸಕ್ರಮದಡಿ ಒಟ್ಟು ೧೨೩೫ ಜನ ರೈತರಿಗೆ ಸಾಗುವಳಿ ಚೀಟಿಗಳನ್ನು ನೀಡಲಾಗಿದೆ. ಸಾಗುವಳಿ ಚೀಟಿಯನ್ನು ಪಡೆದಿರುವ ೧೨೩೫ ಜನರಿಗೂ ಆರ್.ಟಿ.ಸಿ.ಯನ್ನು ನೀಡಲಾಗಿದೆ ಎಂದು ಸಚಿವರು ಉತ್ತರಿಸಿದರು. ಇದರಲ್ಲಿ ೧೬೯ ಪ್ರಕರಣಗಳಲ್ಲಿ ಪಹಣಿಯನ್ನು ರದ್ದುಪಡಿಸಲಾಗಿದೆ.
ಅಕ್ರಮ-ಸಕ್ರಮ ಸಮಿತಿಯಲ್ಲಿ ಮಂಜೂರಾದ ಪ್ರಕರಣಗಳಲ್ಲಿ ಕೆಲವು ಪ್ರಕರಣಗಳು ನಿಯಮಬಾಹಿರವಾಗಿ ಮಂಜೂರಾಗಿರುತ್ತದೆ ಎಂದು ದೂರು ಸ್ವೀಕೃತವಾಗಿರುತ್ತದೆ. ಅದರಂತೆ ಸರಕಾರದ ಆದೇಶ ಸಂಖ್ಯೆ ಆರ್.ಡಿ. ೨೬ ಎಲ್‌ಜಿಕ್ಯೂ ೨೦೧೩. ದಿನಾಂಕ ೨೫.೦೯.೨೦೧೩ ಮತ್ತು ಅಪರ ನಿಬಂಧಕರು (ವಿಚಾರಣೆಗಳು-೫) ಇವರ ಪತ್ರ ಸಂಖ್ಯೆ ಕಂಪ್ಲೆAಟ್ / ಲೋಕ್ / ಎಂ.ವೈ.ಎಸ್./೨೫೬೧/೨೦೧೩/ಎಆರ್‌ಇ-೫, ದಿನಾಂಕ ೨೮.೦೩.೨೦೧೪ ರ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಅಕ್ರಮ-ಸಕ್ರಮ ಸಮಿತಿಯಲ್ಲಿ ಮಂಜೂರು ಮಾಡಿದ್ದ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ ಕರ್ನಾಟಕ ಭೂ ಕಂದಾಯ ನಿಯಮಗಳು, ೧೯೬೬ ರ ನಿಯಮ ೧೦೮ ರಡಿಯಲ್ಲಿ ೧೬೯ ಪ್ರಕರಣಗಳಲ್ಲಿ ಮಂಜೂರಾತಿಯನ್ನು ವಜಾಗೊಳಿಸಿ ಪಹಣಿಯನ್ನು ರದ್ದುಪಡಿಸಲಾಗಿದೆ. ಸಾಗುವಳಿ ಚೀಟಿ ಹಾಗೂ ಆರ್.ಟಿ.ಸಿ.ಗಳನ್ನು ನೀಡಲು ಹೊರಡಿಸಿರುವ ಯಾವುದೇ ಆದೇಶವನ್ನು ರದ್ದುಪಡಿಸಿರುವುದಿಲ್ಲ ಎಂದು ಸಚಿವರು ಮಾಹಿತಿಯಿತ್ತರು.