ಕುಶಾಲನಗರ, ಸೆ. ೨೫: ಕೊಣನೂರು -ಮಾಕುಟ್ಟ ರಾಜ್ಯ ಹೆದ್ದಾರಿಯ ರಸ್ತೆ ಗುಡ್ಡೆಹೊಸೂರಿನಿಂದ ಕಬ್ಬಿನಗದ್ದೆ ತನಕ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಸೂಚಿಸಿರುವ ಪರ್ಯಾಯ ಸಂಚಾರ ವ್ಯವಸ್ಥೆ ವಾಹನ ಚಾಲಕರಿಗೆ ಭಾರಿ ಅನಾನುಕೂಲ ಉಂಟು ಮಾಡಿದೆ.

ಪರ್ಯಾಯ ರಸ್ತೆಯಾಗಿ ಕುಶಾಲನಗರ -ಕೊಡಗರಹಳ್ಳಿ- -ಕಂಬಿಬಾಣೆ -ಚಿಕ್ಲಿಹೊಳೆ- ರಂಗಸಮುದ್ರ ಮಾರ್ಗ ಸೂಚಿಸಿದ್ದು, ಈ ಮಾರ್ಗ ನಿರ್ವಹಣೆಯ ಕೊರತೆಯಿಂದ ಸಂಪೂರ್ಣ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯುದ್ದಕ್ಕೂ ಗುಂಡಿಗಳು ಕಂಡುಬರುತ್ತಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಇನ್ನೊಂದೆಡೆ, ಚಿಕ್ಲಿಹೊಳೆ ರಂಗಸಮುದ್ರ ರಸ್ತೆ ಉದ್ದಕ್ಕೂ ರಸ್ತೆಯ ಎರಡೂ ಭಾಗಗಳಲ್ಲಿ ಭಾರೀ ಪೊದೆಗಳು ಬೆಳೆದು ನಿಂತಿವೆ. ಇದರಿಂದ ವಾಹನ ಸಂಚಾರ ಪಾದಚಾರಿಗಳಿಗೆ ತೊಂದರೆ ಉಂಟಾಗುವ ನಡುವೆ ಭಾರಿ ಅಪಾಯವನ್ನು ಆಹ್ವಾನಿಸುವಂತಿದೆ. ಎದುರುಗಡೆಯಿಂದ ಬರುವ ವಾಹನಗಳು ಕೂಡ ಈ ಪೊದೆಗಳ ನಡುವೆ ಕಾಣಿಸುತ್ತಿಲ್ಲ ಎಂದು ಖಾಸಗಿ ಬಸ್ ಚಾಲಕ ಆನಂದ್ ಶಕ್ತಿಗೆ ಮಾಹಿತಿ ನೀಡಿದ್ದಾರೆ.

ಪರ್ಯಾಯ ರಸ್ತೆಯ ನಿರ್ವಹಣೆಯನ್ನು ತಕ್ಷಣ ನಿರ್ವಹಿಸುವಂತೆ ಖಾಸಗಿ ಬಸ್ ಮಾಲೀಕರು ಚಾಲಕರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

ಇನ್ನೊಂದೆಡೆ ಮೀಸಲು ಅರಣ್ಯಗಳ ನಡುವೆ ಇರುವ ಈ ರಸ್ತೆಯಲ್ಲಿ ಹಾಡಹಗಲೇ ಕಾಡಾನೆಗಳ ಕೂಡ ಬೀಡು ಬಿಡುತ್ತಿದ್ದು, ಇದು ಕೂಡ ಅಪಾಯಕ್ಕೆ ಆಹ್ವಾನ ಮಾಡಿದಂತಿದೆ. ಅರಣ್ಯ ಇಲಾಖೆ ಈ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಬೇಕಾಗಿದೆ ಎಂದು ಖಾಸಗಿ ಬಸ್ ಮಾಲೀಕ ಜಯಂತ್ ಶಕ್ತಿ ಮೂಲಕ ಕೋರಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು ಸಂಬAಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪರ್ಯಾಯ ರಸ್ತೆಯ ದುರಸ್ತಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.