*ಗೋಣಿಕೊಪ್ಪ, ಸೆ. ೨೫: ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ ಕರೆ ನೀಡಿದರು.
ಪೊನ್ನಂಪೇಟೆ ಮಹಿಳಾ ಶಿಶು ಇಲಾಖೆಯ ಸಭಾಂಗಣದಲ್ಲಿ ನಡೆದ ಹುದಿಕೇರಿ ವರ್ತುಲ ವತಿಯಿಂದ ನಡೆದ ಪೋಷಣಾ ಮಾಸಾಚಾರಣೆಗೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರು ಆರೋಗ್ಯ ವಾಗಿದ್ದಾಗ ಕುಟುಂಬವು ಆರೋಗ್ಯವಾಗಿರುತ್ತದೆ. ಇದರಿಂದ ದೇಶವು ಆರೋಗ್ಯ ಪೂರ್ಣತೆಯನ್ನು ಹೊಂದಿಕೊಳ್ಳಲು ಸಾಧ್ಯವಿದೆ. ಸರಿಯಾದ ಪೋಷಣೆ ದೇಶವನ್ನು ಬೆಳಗಿಸುತ್ತದೆ. ಮಹಿಳೆಯರು ಮತ್ತು ಮಕ್ಕಳು ಪೌಷ್ಟಿಕ ಆಹಾರ ಸೇವನೆಯಿಂದ ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಬೇಕೆಂದು ಹೇಳಿದರು.
ವೀರಾಜಪೇಟೆ ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ರಾಜೇಶ್ ಮಾತನಾಡಿ, ಗರ್ಭಿಣಿಯರು ಉತ್ತಮ ಪೌಷ್ಟಿಕ ಆಹಾರಗಳನ್ನು ಸೇವಿಸುವುದರಿಂದ ಹೆಚ್ಚಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಹುಟ್ಟುವ ಮಕ್ಕಳು ದಷ್ಟಪುಷ್ಟವಾಗಿ ಆರೋಗ್ಯವಂತ ರಾಗಿರುತ್ತಾರೆ ಎಂದು ತಿಳಿಸಿದರು.
ಹುದಿಕೇರಿ ವರ್ತುಲ ವತಿಯಿಂದ ಗರ್ಭಿಣಿಯರಿಗೆ ಆರೈಕೆ, ಸೀಮಂತ, ಮಡಿಲು ತುಂಬಿಸುವುದು, ಮಕ್ಕಳಿಗೆ ಅಕ್ಷರಾಭ್ಯಾಸ, ಅನ್ನ ಪ್ರಾಸನ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿತ್ತು. ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ತೆಗೆದುಕೊಳ್ಳಬಹುದಾದ ಪೌಷ್ಟಿಕ ಆಹಾರಗಳಾದ ತರಕಾರಿ, ಹಣ್ಣು, ದವಸದಾನ್ಯಗಳನ್ನು ಅಲಂಕೃತವಾಗಿ ಪ್ರದರ್ಶಿಸಿ ಮಾಹಿತಿ ನೀಡಲಾಯಿತು.
ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಅವರ ಸೇವೆಯನ್ನು ಪರಿಗಣಿಸಿ ಗೌರವಿಸುವ ಮೂಲಕ ಬೀಳ್ಕೊಡಲಾಯಿತು.
ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ದೇಚಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಹುದಿಕೇರಿ ಪ್ರಾಥಮಿಕ ಕೇಂದ್ರದ ವೈದ್ಯ ಖಲೀಲ್ ಮೊಹಮ್ಮದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಮೂಕಳೇರ ಆಶಾ ಪೂಣಚ್ಚ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕಾವೇರಮ್ಮ, ತಾಲೂಕು ಅಧ್ಯಕ್ಷೆ ಸುಮಿತ್ರಾ, ಹುದಿಕೇರಿ ವರ್ತುಲದ ರಮಾಮಣಿ, ಭಾಗ್ಯ, ರಾಣಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಾದ ಗಂಗಮ್ಮ, ಗೌರಮ್ಮ ಹಾಗೂ ಪೋಷಣಾ ಅಭಿಯಾನದ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.