ಸಿದ್ದಾಪುರ, ಸೆ ೨೫: ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಯೂನಿಯನ್ ಬ್ಯಾಂಕ್ ಸಮರ್ಪಕ ಸೇವೆ ನೀಡುತ್ತಿಲ್ಲ ಎಂದು ಆರೋಪಿಸಿ ಬ್ಯಾಂಕ್‌ನ ಗ್ರಾಹಕರು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಪಿ.ಆರ್. ಭರತ್ ಮಾತನಾಡಿ, ಈ ಹಿಂದೆ ಕಾರ್ಪೋರೇಶನ್ ಬ್ಯಾಂಕ್ ಆಗಿದ್ದ ಸಂದರ್ಭದಲ್ಲಿ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆಗಳು ಲಭಿಸುತಿತ್ತು. ಇದೀಗ ಯೂನಿಯನ್ ಬ್ಯಾಂಕ್‌ನೊAದಿಗೆ ವಿಲೀನಗೊಂಡ ಬಳಿಕ ನಿತ್ಯ ವ್ಯವಹಾರಗಳಿಗೆ ಗ್ರಾಹಕರು ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ೮ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕಾದ ಬ್ಯಾಂಕ್‌ನಲ್ಲಿ ಇದೀಗ ಕೇವಲ ೩ ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ವ್ಯವಹಾರಗಳಿಗೆ ಸಮಸ್ಯೆಯಾಗುತ್ತಿವೆ.

ಅಲ್ಲದೇ ಬಡ ಕೂಲಿ ಕಾರ್ಮಿಕರು ದಿನದ ಕೆಲಸ ಬಿಟ್ಟು ಬ್ಯಾಂಕ್‌ಗೆ ಬಂದು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಯೂನಿಯನ್ ಬ್ಯಾಂಕ್‌ನ ಮೇಲಾಧಿಕಾರಿಗಳು ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಲು ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಲೋಪದೋಷಗಳನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಹಕಾರದಿಂದ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ಸಿಬ್ಬಂದಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಸುಹದಾ ಅಶ್ರಫ್, ಸಫಿಯಾ, ಗ್ರಾಮಸ್ಥರಾದ ಚಂದ್ರ, ಜೋಸ್, ಆಸಿಫ್, ಟಿ.ಟಿ. ಉದಯಕುಮಾರ್, ಮಣಿ, ಶಶಿ, ಇನ್ನಿತರರು ಹಾಜರಿದ್ದರು.