ಬೆಂಗಳೂರು, ಸೆ. ೨೪: ಕೊಡಗಿನಲ್ಲಿ ಕಾರ್ಮಿಕರಿಗೆ ಕೋವಿಡ್ ಸಂದರ್ಭದಲ್ಲಿ ಸರಕಾರ ನೀಡಿರುವ ಪರಿಹಾರದ ಕುರಿತು ಕೊಡಗಿನ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನಿಸಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಸಂಕಷ್ಟಕ್ಕೊಳ ಗಾಗಿರುವ ಎಷ್ಟು ಜನ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಮೂಲಕ ಇದುವರೆಗೆ ನೆರವು ಒದಗಿಸಲಾಗಿದೆ ಎಂದು ವೀಣಾ ಅಚ್ಚಯ್ಯ ಪ್ರಶ್ನಿಸಿದರು.

೨೦೨೦-೨೧ ರಲ್ಲಿ ತಲಾ ರೂ. ೫ ಸಾವಿರದಂತೆ ೧೭೨೭ ಕಾರ್ಮಿಕರು ಹಾಗೂ ೨೦೨೧-೨೨ ರಲ್ಲಿ ತಲಾ ರೂ. ೩ ಸಾವಿರದಂತೆ ೨೪೮೨ ಮಂದಿ ಕಾರ್ಮಿಕರಿಗೆ ಸಹಾಯಧನ ವಿತರಿಸಲಾಗಿದೆ ಎಂದು ಕಾರ್ಮಿಕ ಸಚಿವರು ಉತ್ತರಿಸಿದರು.

ಅಲ್ಲದೆ, ರಾಜ್ಯ ಸರಕಾರ ಕೋವಿಡ್-೧೯ ರಿಂದ ಸಂಕಷ್ಟಕ್ಕೊಳಗಾದ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಪರಿಹಾರ ವಿತರಿಸಲು ಕ್ರಮ ಕೈಗೊಂಡಿದ್ದು, ಕೊಡಗು ಜಿಲ್ಲೆಗೆ ಸಂಬAಧಿಸಿದ ಮಾಹಿತಿ ಈ ಕೆಳಕಂಡAತಿದೆ.

ಕೋವಿಡ್-೧೯ರ ೨೦೨೦ನೇ ವರ್ಷದ ಮೊದಲನೆ ಅಲೆಯ ಲಾಕ್‌ಡೌನ್ ಕಾರಣ ಸಂಕಷ್ಟಕ್ಕೊಳಗಾದ ಅಗಸ ಮತ್ತು ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ೧,೪೧,೬೦೨ ಅಸಂಘಟಿತ ಕಾರ್ಮಿಕರಿಂದ ಒಂದು ಬಾರಿ ತಲಾ ರೂ. ೫ ಸಾವಿರಗಳ ನೆರವನ್ನು ಕೋರಿ ಅರ್ಜಿ ಸ್ವೀಕರಿಸಲಾಗಿದ್ದು, ಈವರೆಗೆ ೧,೧೯,೪೬೨ ಮಂದಿಗೆ ಒಟ್ಟು ರೂ. ೫೯.೮೨ ಕೋಟಿಗಳ ಪರಿಹಾರವನ್ನು ನೀಡಲಾಗಿದೆ. ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ೬೩೩ ಅಗಸರು ಮತ್ತು ಕ್ಷೌರಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ೫೭೭ ಅರ್ಹ ಕಾರ್ಮಿಕರಿಗೆ ಒಟ್ಟು ರೂ. ೨೮.೮೫ ಲಕ್ಷ ನೆರವನ್ನು ವಿತರಿಸಲಾಗಿದೆ.

ಕೋವಿಡ್-೧೯ರ ೨೦೨೧ನೇ ವರ್ಷದ ಎರಡನೇ ಅಲೆಯ ಲಾಕ್‌ಡೌನ್ ಕಾರಣ ಸಂಕಷ್ಟಕ್ಕೊಳಗಾದ ೧೧ ವರ್ಗಗಳಾದ ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರ ವೃತ್ತಿ ನಿರ್ವಹಿಸುತ್ತಿರುವ ೩,೭೯೨ ಕಾರ್ಮಿಕರಿಂದ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ೨,೫೪೪ ಕಾರ್ಮಿಕರಿಗೆ ತಲಾ ರೂ. ೨ ಸಾವಿರಗಳಂತೆ ಒಟ್ಟು ರೂ. ೫೦.೮೮ ಲಕ್ಷಗಳನ್ನು ವಿತರಿಸಲಾಗಿದೆ.

ಉಳಿದ ಕಾರ್ಮಿಕರ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದ್ದು, ಪರಿಶೀಲನೆ ನಂತರ ಎಲ್ಲಾ ಅರ್ಹ ಕಾರ್ಮಿಕರಿಗೂ ಪರಿಹಾರ ಧನವನ್ನು ವಿತರಿಸಲಾಗುವುದು ಎಂದು ಕಾರ್ಮಿಕ ಸಚಿವರು ವಿವರಿಸಿದರು.

ಕೊಡಗು ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕೋವಿಡ್ ಒಂದನೇ ಅಲೆಯಲ್ಲಿ ೪ ಸಾವಿರ ಆಹಾರ ಕಿಟ್‌ಗಳನ್ನು ಮತ್ತು ಕೋವಿಡ್-೧೯ರ ಎರಡನೇ ಅಲೆಯಲ್ಲಿ ೬ ಸಾವಿರ ಸುರಕ್ಷಾ ಕಿಟ್‌ಗಳನ್ನು ವಿತರಿಸಲಾಗಿದೆ.

ಕಾರ್ಮಿಕರ ಮಕ್ಕಳಿಗೆ ನೆರವು

ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾರ್ಮಿಕರ ಮಕ್ಕಳು ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದು, ಆ ಮಕ್ಕಳ ನೆರವಿಗಾಗಿ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ವೀಣಾ ಅಚ್ಚಯ್ಯ ಪ್ರಶ್ನಿಸಿದರು. ಈ ಕುರಿತು ಸಚಿವರು ಈ ಕೆಳಗಿನ ಮಾಹಿತಿಯಿತ್ತರು.

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೊಡಗು ಜಿಲ್ಲೆಯಲ್ಲಿ ನೋಂದಾಯಿತ ಫಲಾನುಭವಿಗಳ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ವಿತರಿಸಲಾಗಿದೆ. ಶೈಕ್ಷಣಿಕ ಸಹಾಯಧನ ನೀಡಿರುವ ಮೊತ್ತ ೨೦೧೯-೨೦ರಲ್ಲಿ ೩೨೩ ಮಂದಿಗೆ ರೂ. ೨೬,೧೯,೦೦೦, ೨೦೨೦-೨೧ರಲ್ಲಿ ೨೬೬ ಮಂದಿಗೆ ರೂ. ೩೧,೯೮,೦೦೦ ಹಾಗೂ ೨೦೨೧-೨೨ ರಲ್ಲಿ ೩೪೧ ಮಂದಿಗೆ ರೂ. ೪೧,೨೪,೦೦೦.