ಚೆಟ್ಟಳ್ಳಿ, ಸೆ. ೨೪ : ಗರ್ವಾಲೆಯ ಕೋಟೆಬೆಟ್ಟ ಈಶ್ವರ ದೇವಾಲಯ ಸಮಿತಿ ಮತ್ತು ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಕೋಟೆ ಬೆಟ್ಟಕ್ಕೆ ತೆರಳುವ ಪ್ರವಾಸಿಗರಿಂದ ಹಾಗೂ ಭಕ್ತಾದಿಗಳಿಂದ ಸುಂಕ ವಸೂಲಿ ಮಾಡುತ್ತಿರುವುದು ಗರ್ವಾಲೆಯ ನೆರೆಯ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದು ಈಗಾಗಲೇ ಪರಸ್ಪರ ತಿಕ್ಕಾಟಕ್ಕೆ ಎಡೆಮಾಡಿದೆ.

ಇದನ್ನು ಗರ್ವಾಲೆ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅವರು ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರ ಗಮನಕ್ಕೆ ತಂದ ಮೇರೆಗೆ ಜಯಣ್ಣ ಅವರು ಪೊಲೀಸ್, ಸಂಬAಧಿಸಿದ ಅರಣ್ಯ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ-ಸದಸ್ಯರೊಡಗೂಡಿ ಸ್ಥಳ ಪರಿಶೀಲನೆ ನಡೆಸಿದರು.

ದೇವಸ್ಥಾನದ ಸಮಿತಿಯವರು ಪೈಸಾರಿ ಜಾಗದಲ್ಲಿ ಗೇಟನ್ನು ನಿರ್ಮಿಸಿದ್ದು, ಅದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವುದಾಗಿ ಪರಿಶೀಲನೆ ವೇಳೆ ಜಯಣ್ಣ ಅವರ ಗಮನಕ್ಕೆ ಬಂದಿದ್ದು, ಪಂಚಾಯಿತಿಯ ಸಭಾಂಗಣದಲ್ಲಿ ಊರವರ ಸಮ್ಮುಖದಲ್ಲಿ ದೇವಸ್ಥಾನ ಮತ್ತು ಹಿತರಕ್ಷಣಾ ಸಮಿತಿ ಸದಸ್ಯರನ್ನು ಕರೆಯಿಸಿ ಜಯಣ್ಣ ಅವರ ನೇತೃತ್ವದಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಿತು.

ದೇವಸ್ಥಾನಕ್ಕೆ ಸಾವಿರ ವರ್ಷದ ಇತಿಹಾಸ ಹೊಂದಿದ್ದು, ಇದರ ರಕ್ಷಣೆಗೆ ಹಲವು ಕಟ್ಟುಪಾಡುಗಳನ್ನು ಪರಿಪಾಲಿಸಿಕೊಂಡು ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದು ದೇವಳದ ಮೇಲಿನ ಬಂಡೆಗಳ ಮೇಲೆ ಹತ್ತಿ ಪ್ರಾಂಗಣದ ಒಳಗೆ ಇಳಿದು ಮಲಿನಗೊಳಿಸುತ್ತಿದ್ದಾರೆ. ಇದರ ಬಗ್ಗೆ ಹಲವು ಬಾರಿ ದೂರು ನೀಡಲಾಗಿದೆ ಎಂದು ದೇವಸ್ಥಾನ ಸಮಿತಿಯವರು ಸಭೆಯಲ್ಲಿ ಜಯಣ್ಣ ಅವರ ಗಮನಕ್ಕೆ ತಂದರು. ಪ್ರವಾಸಿಗರು ಅಲ್ಲಲ್ಲಿ ಕಸ ಎಸೆಯುವುದು, ಸ್ವಚ್ಛತೆಗೆ ಧಕ್ಕೆ ತರುವ ಕೆಲಸಕ್ಕೆ ಮುಂದಾಗಿದ್ದು, ಸಮಿತಿಯ ವತಿಯಿಂದ ಮೂವರನ್ನು ನೇಮಕ ಮಾಡಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಿಧಿ ಸಂಗ್ರಹ ಮಾಡುತ್ತಿರುವುದಾಗಿ ಹೇಳಿದರು.

ಸಮಿತಿಯ ಕಾರ್ಯ ಅಕ್ರಮವಾದರೆ ಸರಕಾರ ತಮಗೆ ಲಿಖಿತ ನೋಟೀಸ್ ನೀಡಬೇಕು. ದೇವಸ್ಥಾನದ ಸುತ್ತಮುತ್ತಲಿನ ನಿರ್ವಹಣೆ ಮತ್ತು ನೈರ್ಮಲ್ಯವನ್ನು ಕಾಪಾಡುವ ಹೊಣೆಯನ್ನು ಅರಣ್ಯ ಇಲಾಖೆ ಅಥವಾ ಪೊಲೀಸ್ ಇಲಾಖೆ ಅಥವಾ ಪಂಚಾಯಿತಿ ನಿರ್ವಹಿಸಿದರೆ ತಾವು ಇದನ್ನು ತಕ್ಷಣವೇ ಕೈಬಿಡುವುದಾಗಿ ಸಮಿತಿಯವರು ಉತ್ತರಿಸಿದರು. - ಪಪ್ಪು ತಿಮ್ಮಯ್ಯ