ಮಡಿಕೇರಿ, ಸೆ. ೨೪; ಪ್ರಾಚೀನ ಬುಡಕಟ್ಟು ಭಾಷೆ, ಹಾಗೂ ಪಂಚ ದ್ರಾವೀಡ ಭಾಷೆಯಲ್ಲಿ ಒಂದಾಗಿರುವ ಕೊಡವ ಹಾಗೂ ತುಳು ಭಾಷೆಗಳನ್ನು ಸಂವಿಧಾನ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಕರ್ನಾಟಕ ಸರ್ಕಾರ, ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ಮುಂದಾಗಿರುವುದನ್ನು ಅಖಿಲ ಕೊಡವ ಸಮಾಜವು ಸ್ವಾಗತಿಸುತ್ತದೆ ಎಂದು, ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹೇಳಿದ್ದಾರೆ.

ಪತ್ರಿಕೆ ಹೇಳಿಕೆ ನೀಡಿರುವ ಅವರು ಕೊಡವ ಭಾಷೆಯು ಮಾನವರಲ್ಲಿ ಅಕ್ಷರಾಭ್ಯಾಸ ಅಥವಾ ಲಿಪಿ ಸಂಶೋಧನೆಗಿAತಲೂ ಮೊದಲೇ ಪ್ರಚಲಿತದಲ್ಲಿದ್ದ ಪ್ರಪಂಚದ ಕೆಲವೇ ಕೆಲವು ಭಾಷೆಗಳಲ್ಲಿ ಒಂದು. ಇದೀಗ ಕೊಡವ ಭಾಷೆಯನ್ನಾಡುವವರ ಜನಸಂಖ್ಯೆಯೂ ಕ್ಷೀಣಿಸುತ್ತಿರುವುದರಿಂದ ಭಾಷೆಯ ಬಳಕೆಯೂ ಕಡಿಮೆಯಾಗಿ ವಿನಾಶದ ಅಂಚಿಗೆ ಸರಿಯುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೊಡವ ಭಾಷಾಭಿಮಾನವು ವೃದ್ಧಿಸುತ್ತಿದ್ದು, ಅದರಲ್ಲೂ ೧೯೦೦ರ ಆರಂಭದಿAದ ಕೊಡವ ಭಾಷೆಯಲ್ಲಿ ಸಾಕಷ್ಟು ಸಾಹಿತ್ಯ ಗ್ರಂಥಗಳು, ಕಥೆ ಕಾದಂಬರಿಗಳ ರಚನೆ, ಕೊಡವ ಭಾಷಾ ಪತ್ರಿಕೆಗಳ ಸ್ಥಾಪನೆ ಹೀಗೆ, ಲಿಪಿ ಇಲ್ಲದ ಭಾಷೆಯೊಂದು ಕನ್ನಡ ಲಿಪಿ ಬಳಕೆಯಿಂದ ಸಾಧಿಸಿರುವುದು, ಲಿಪಿ ಇಲ್ಲದ ಅದೆಷ್ಟೋ ಭಾಷೆಗಳಿಗೆ ಉತ್ತೇಜನಕಾರಿಯಾಗಿ ಕೊಡವ ಭಾಷೆಯು ನಿಂತಿದೆ. ಒಂದು ಸಣ್ಣ ಬುಡಕಟ್ಟು ಭಾಷೆಯಾಗಿ, ತನ್ನದೇ ಲಿಪಿ ಹಾಗೂ ಯಾವುದೇ ಸರ್ಕಾರಿ ಭದ್ರತೆ ಇಲ್ಲದ ಭಾಷೆಯೊಂದರ ಉಳಿವಿಗೆ ಜನಾಂಗೀಯ ಭಾಷಾಭಿಮಾನಿಗಳ ಕೊಡುಗೆಯನ್ನು ನಾವು ಸ್ಮರಿಸುತ್ತೇವೆ ಎಂದಿದ್ದಾರೆ.

ಆದರೆ ಪ್ರಚೀನ ಬುಡಕಟ್ಟು ಭಾಷೆಯೊಂದಕ್ಕೆ ಸಂವಿಧಾನಿಕ ಮಾನ್ಯತೆ ಅನಿವಾರ್ಯವಾಗಿದ್ದು, ಈಗಾಗಲೇ ಹಲವು ಭಾಷೆಗಳು ಈ ಮಾನ್ಯತೆಯಿಂದ ಅಭಿವೃದ್ಧಿ ಹೊಂದುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

ಇದು ಕೊಡವ ಹಾಗೂ ತುಳು ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಸೂಕ್ತ ಸಮಯವಾಗಿದ್ದು, ಕರ್ನಾಟಕ ಸರ್ಕಾರ ಪೂರಕ ಸ್ಪಂದಿಸುತ್ತಿರುವುದು ಸ್ವಾಗತಾರ್ಹ. ಸದನದಲ್ಲಿ ಈ ವಿಚಾರವನ್ನು ಹಲವಾರು ಬಾರಿ ಪ್ರಸ್ತಾಪಿಸುವ ಮೂಲಕ ಗಮನ ಸೆಳೆದ ಶಾಸಕ ಬಿ.ಕೆ. ಹರಿಪ್ರಸಾದ್, ಹಾಗೂ ತುಳುನಾಡಿನವರೇ ಆಗಿ ಪರಿಸ್ಥಿತಿಯ ಗಂಭೀರತೆ ಅರಿತು ಅದಕ್ಕೆ ಸ್ಪಂದಿಸಿರುವ ಸಚಿವ ಸುನಿಲ್ ಕುಮಾರ್ ಅವರು ಅಭಿನಂದನಾರ್ಹರು. ಅಲ್ಲದೇ ಈ ವಿಚಾರವಾಗಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಸಂಘ ಸಂಸ್ಥೆಗಳನ್ನು ನಾವು ಅಭಿನಂದಿಸುತ್ತೇವೆ.

ಕೊಡವ ಹಾಗೂ ತುಳು ಭಾಷೆಗಳು ಸಹೋದರ ಭಾಷೆಗಳಾಗಿದ್ದು, ತುಳು ಭಾಷಿಕರೇ ಸಚಿವರಾಗಿರುವ ಈ ಸಂದರ್ಭ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ಸಚಿವರ ಇಚ್ಚೆಗೆ ಎಲ್ಲಾ ಸಮಾಜ, ಸಂಘ ಸಂಸ್ಥೆಗಳು ಕಾರ್ಯಪ್ರವೃತ್ತರಾಗಿ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕೆ ಬೇಕಾದ ಎಲ್ಲಾ ನೆರವು ಹಾಗೂ ಸಹಕಾರವನ್ನು ಅಖಿಲ ಕೊಡವ ಸಮಾಜ ನೀಡಲಿದೆ ಎಂದು ಮಾತಂಡ ಮೊಣ್ಣಪ್ಪ ಹೇಳಿದ್ದಾರೆ.