ಕುಶಾಲನಗರ, ಸೆ. ೨೫: ಹರಿಯುವ ನದಿಯ ನೀರಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಜವಾಬ್ದಾರಿಯಾಗಿದೆ ಎಂದು ಹಿರಿಯ ಅರ್ಚಕ ಕೃಷ್ಣಮೂರ್ತಿ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ಕಾವೇರಿ ನದಿಗೆ ನಡೆದ ೧೨೩ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೂಲ ಕ್ಷೇತ್ರವಾದ ತಲಕಾವೇರಿಯಲ್ಲಿ ತೀರ್ಥರೂಪದಲ್ಲಿ ಸ್ವೀಕರಿಸುವ ಪವಿತ್ರ ಕಾವೇರಿಯನ್ನು ಸಮುದ್ರ ಸಂಗಮ ತನಕ ಯಾವುದೇ ರೀತಿಯಲ್ಲಿ ಕಲುಷಿತವಾಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್ ಮಾತನಾಡಿ, ನಿರಂತರ ಜನಾಂದೋಲನ ಮೂಲಕ ಮತ್ತೆ ಸ್ವಚ್ಛ ಕಾವೇರಿಯ ಕನಸು ನನಸಾಗಲು ಸಾಧ್ಯ ಎಂದರು.
ನದಿ ಆರೋಗ್ಯ ಕಾಪಾಡುವಲ್ಲಿ ಸಮುದಾಯದ ಜವಾಬ್ದಾರಿ ಪ್ರಮುಖವಾಗಿದೆ ಎಂದರು. ಅಷ್ಟೋತ್ತರ ಅರ್ಚನೆ ಬಳಿಕ ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಲಾಯಿತು. ಈ ಸಂದರ್ಭ ಮಹಾ ಆರತಿ ಬಳಗದ ಪ್ರಮುಖರಾದ ಚಂದ್ರಮೋಹನ್, ವೈಶಾಖ, ಸೋಮಶೇಖರ್, ಅಣ್ಣಯ್ಯ, ರೊನಾಲ್ಡ್ ಇದ್ದರು.