ಚೆಯ್ಯಂಡಾಣೆ, ಸೆ. ೨೫: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ವಾರ್ಡ್ ಸಭೆಯು ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಸಾರ್ವಜನಿಕರ ಪರವಾಗಿ ಬಟ್ಟಿಯಂಡ ಜಯರಾಂ ಮಾತನಾಡಿ ಚೆಯ್ಯಂಡಾಣೆಯ ಪಶು ವೈದ್ಯ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದ್ದು, ಕ್ರಮಕೈಗೊಳ್ಳಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕೂಡಲೇ ಇದರ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಚೆಯ್ಯಂಡ ಅಪ್ಪಚ್ಚು ಹಾಗೂ ಬೋವ್ವೇರಿಯಂಡ ಲವಕುಮಾರ್ ಮಾತನಾಡಿ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನನಿತ್ಯ ವಿದ್ಯುತ್ ಅಡಚಣೆ ಉಂಟಾಗುತ್ತಿದ್ದು. ರಾತ್ರಿ ವೇಳೆ ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತಿದ್ದು ಲೈನ್ ಮ್ಯಾನ್ ಹಗಲು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ರಾತ್ರಿ ವೇಳೆ ಕಾರ್ಯನಿರ್ವಹಿಸಲು ಖಾಯಂ ಲೈನ್ ಮ್ಯಾನ್ ನಿಯೋಜನೆ ಗೊಳಿಸಲು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದು ಕೂಡಲೇ ಚೆಯ್ಯಂಡಾಣೆಗೆ ಖಾಯಂ ಲೈನ್‌ಮ್ಯಾನ್ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಸಾರ್ವಜನಿಕರ ಪರವಾಗಿ ಬೋವೇರಿಯಂಡ ದಿಲೀಪ್ ಮಾತನಾಡಿ, ನಲ್ಲಿ ನೀರು ಸರಬರಾಜಿನಲ್ಲಿ ಮೀಟರ್ ಅಳವಡಿಸಿದ್ದು, ವ್ಯತ್ಯಾಸ ಕಾಣುತ್ತಿದ್ದು, ಕೂಡಲೇ ಇದಕ್ಕೊಂದು ಪರಿಹಾರಕ್ಕೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ನರಿಯಂದಡ ಗ್ರಾಮ ಪಂಚಾಯಿತಿಯ ಎಲ್ಲ ಗ್ರಾಮದ ಎಲ್ಲ ಮನೆಗಳಿಗೂ ನಲ್ಲಿ ನೀರು ಸರಬರಾಜು ಮಾಡಲು ಸೂಚಿಸಲಾಗಿದ್ದು. ಇದರ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಮುಗಿದ ಕೂಡಲೇ ಇದಕ್ಕೊಂದು ಪರಿಹಾರ ಖಂಡಿತವಾಗಿ ದೊರಕುವುದಾಗಿ ಹೇಳಿದರು.
ಅಧ್ಯಕ್ಷ ಬಿದ್ದಂಡ ರಾಜೇಶ್ ಮಾತನಾಡಿ, ಸಾರ್ವಜನಿಕ ಹಾಗೂ ಸ್ಥಳೀಯ ಪ್ರಾರ್ಥಮಿಕ ಶಾಲೆಯ ಬಾವಿ ಶುಚಿಗೊಳಿಸಲು ಹಲವಾರು ಮನವಿ ಬಂದಿದ್ದು. ಇದನ್ನು ಪರಿಗಣಿಸಿ ಆದಷ್ಟು ಬೇಗ ಬಾವಿ ಶುಚಿಗೊಳಿಸಿ ಕೊಡಲಾಗುವುದು ಎಂದರು.
ಆಶಾಕಾರ್ಯಕರ್ತೆಯೋರ್ವರು ಮಾತನಾಡಿ, ಗ್ರಾಮದಲ್ಲಿ ಶೇ. ೯೬ ಸಾರ್ವಜನಿಕರು ಕೋವಿಡ್ ಲಸಿಕೆಯನ್ನು ಪಡೆದಿದ್ದು, ಇನ್ನು ಶೇ. ೪ ಮಾತ್ರ ಬಾಕಿ ಇದೆ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳು ಕೈಗೊಂಡಿದ್ದು, ಇನ್ನಷ್ಟು ಕಾರ್ಯಕ್ರಮಗಳ ಮೂಲಕ ನರಿಯಂದಡ ಗ್ರಾಮ ಪಂಚಾಯಿತಿಯನ್ನು ಕೊಡಗಿನಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲೇ ಅತ್ಯುತ್ತಮ ಗ್ರಾಮ ಪಂಚಾಯಿತಿಯನ್ನಾಗಿ ಮಾಡುವ ಆಶ್ವಾಸನೆನ್ನು ಅಧ್ಯಕ್ಷ ರಾಜೇಶ್ ಅವರು ನೀಡಿದರು.
ಪ್ರಾರ್ಥನೆಯನ್ನು ಸ್ಥಳೀಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಡೆಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಬಿದ್ದಪ್ಪ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. -ಅಶ್ರಫ್ ಚೆಯ್ಯಂಡಾಣೆ