ಗೋಣಿಕೊಪ್ಪಲು, ಸೆ. ೨೩: ನ್ಯಾಷನಲ್ ಭಾರತ್ ಸೇವಕ್ ಸಮಾಜದ ಕೊಡಗು ಜಿಲ್ಲಾಧ್ಯಕ್ಷರಾಗಿ ಟಿ.ಎಲ್. ಶ್ರೀನಿವಾಸ್ ನೇಮಕಗೊಂಡಿದ್ದಾರೆ. ಅಧಿಕೃತ ಆದೇಶ ಪತ್ರ, ಗೌರವ ದೃಢೀಕರಣ ಹಾಗೂ ಗುರುತಿನ ಕಾರ್ಡನ್ನು ತಾ. ೨೦ ರಂದು ಬೆಂಗಳೂರು ಕುಮಾರ ಕೃಪಾದಲ್ಲಿ ರಾಜ್ಯಾಧ್ಯಕ್ಷ ಎಂ. ಗಜೇಂದ್ರ ಅವರಿಂದ ಸ್ವೀಕರಿಸಿದರು. ರಾಜಕೀಯ ರಹಿತವಾಗಿ ಜಾತ್ಯತೀತವಾಗಿ ಸಮಾಜಮುಖಿಯಾಗಿ ಇನ್ನು ಮುಂದೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ, ವಿವಿಧ ಸೇವಾ ಯೋಜನೆಗಳ ಅನುಷ್ಠಾನದ ನಿಟ್ಟಿನಲ್ಲಿ ಪ್ರಸ್ತುತ ಸೇವಕ್ ಸಮಾಜ ಕಾರ್ಯನಿರ್ವಹಿಸಲಿದ್ದು, ಶೀಘ್ರದಲ್ಲಿಯೇ ವಿವಿಧ ಜಾತಿ ಜನಾಂಗಗಳಿಗೆ ಆದ್ಯತೆ ನೀಡಿ ಸಮಿತಿಯೊಂದನ್ನು ರಚನೆ ಮಾಡಲಾಗುವದು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಗೋಣಿಕೊಪ್ಪಲಿನಲ್ಲಿ ಮುಂದಿನ ತಿಂಗಳು ಜಿಲ್ಲಾ ಕೇಂದ್ರ ಕಚೇರಿ ಆರಂಭಿಸಲಿದ್ದು ರಾಜ್ಯಾಧ್ಯಕ್ಷರ ತಂಡ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಜನತೆಗೆ ಸಿಗುವ ವಿವಿಧ ಸೇವೆಗಳ ಬಗ್ಗೆ ಅಗತ್ಯ ಮಾಹಿತಿ ನೀಡಲಿದ್ದಾರೆ. ಭ್ರಷ್ಟಾಚಾರದ ವಿರುದ್ಧವೂ ಹೋರಾಟ ಮಾಡಲು ಸಮಿತಿಗೆ ಅಧಿಕಾರ ನೀಡಲಾಗಿದೆ. ಕೊಡಗು ಬಲಿಜ ಸಮಾಜ ಹಾಗೂ ಕಾಯಕ ಸಮಾಜಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿಯೂ ಶ್ರೀನಿವಾಸ್ ಸೇವೆ ಸಲ್ಲಿಸುತ್ತಿದ್ದಾರೆ.