ಸೋಮವಾರಪೇಟೆ,ಸೆ.೨೨: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದ ನಳಿನಿ ಗಣೇಶ್ ಅವರ ನಿಧನದಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಈವರೆಗೆ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ೪ ತಿಂಗಳಿನಿAದ ಉಪಾಧ್ಯಕ್ಷರಾಗಿದ್ದ ಬಿ. ಸಂಜೀವ ಅವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಂಚಾಯಿತಿಯ ಕೆಲಸ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಈ ನಡುವೆ ಪಟ್ಟಣ ಪಂಚಾಯಿತಿಯ ಇತರ ಸದಸ್ಯರು ಅನೇಕ ಬಾರಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ ಕಳೆದ ೪ ತಿಂಗಳಿನಿAದ ಅಧಿಕೃತ ಅಧ್ಯಕ್ಷರಿಲ್ಲದೇ ಪಂಚಾಯಿತಿ ಕಾರ್ಯನಿರ್ವಹಿಸುತ್ತಿದೆ.
ಕಳೆದ ೨೦೧೮ರ ಅಕ್ಟೋಬರ್ ೨೯ ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದಿದ್ದು, ಅಕ್ಟೋಬರ್ ೩೧ರಂದು ಫಲಿತಾಂಶ ಹೊರಬಿದ್ದಿತ್ತು. ಇದಾಗಿ ಬರೋಬ್ಬರಿ ೨ ವರ್ಷಗಳ ನಂತರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಅದರಂತೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದರಿಂದ ಕಳೆದ ೨೦೨೦ ನ.೩ ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ನಳಿನಿ ಗಣೇಶ್ ಆಯ್ಕೆಯಾಗಿದ್ದರು.
ಕೇವಲ ೬ ತಿಂಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಳಿನಿ ಗಣೇಶ್, ಕೊರೊನಾ ಸೋಂಕಿಗೆ ತುತ್ತಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಆ ಮೂಲಕ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನವೂ ತೆರವಾಯಿತು. ಇದಾಗಿ ೪ ತಿಂಗಳು ಕಳೆದಿದ್ದು,
(ಮೊದಲ ಪುಟದಿಂದ) ಈವರೆಗೂ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಈ ನಡುವೆ ಪಟ್ಟಣದ ವಾರ್ಡ್ ೧ (ಉದಯಶಂಕರ್ ಅವರ ನಿಧನದಿಂದ ತೆರವಾದ ಕ್ಷೇತ್ರ) ಹಾಗೂ ವಾರ್ಡ್ ೩ (ನಳಿನಿ ಗಣೇಶ್ ನಿಧನದಿಂದ ತೆರವಾದ ಸ್ಥಾನ)ಕ್ಕೆ ಮರು ಚುನಾವಣೆಯೂ ನಡೆದು, ವಾರ್ಡ್ ೧ರಲ್ಲಿ ಬಿಜೆಪಿಯ ಮೃತ್ಯುಂಜಯ, ವಾರ್ಡ್ ೩ರಲ್ಲಿ ನಳಿನಿ ಗಣೇಶ್ ಅವರ ಸೊಸೆ, ಬಿಜೆಪಿ ಅಭ್ಯರ್ಥಿ ಮೋಹಿನಿ ಅವರುಗಳು ಜಯ ಸಾಧಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪ್ರಥಮ ಅವಧಿಗೆ (೩೦ ತಿಂಗಳು) ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ, ಮೀಸಲಾತಿ ಆಧಾರದ ಮೇಲೆ ಬಿಜೆಪಿಯ ಸದಸ್ಯ ಪಿ.ಕೆ. ಚಂದ್ರು ಹಾಗೂ ಮೋಹಿನಿ ಅವರುಗಳು ಅರ್ಹತೆ ಹೊಂದಿದ್ದಾರೆ.
ಆದರೆ ಈ ಹಿಂದೆ ನಡೆದ ಒಡಂಬಡಿಕೆಯನ್ವಯ ಪಿ.ಕೆ. ಚಂದ್ರು ಅವರೇ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಪ್ರಾರಂಭದಲ್ಲೇ ತನಗೆ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಪಿ.ಕೆ. ಚಂದ್ರು ಅವರು ಪಕ್ಷದ ಮುಖಂಡರು ಹಾಗೂ ಶಾಸಕರಲ್ಲಿ ಬೇಡಿಕೆ ಮುಂದಿಟ್ಟಿದ್ದರು.
ಆದರೆ ಹಿರಿಯರಾಗಿದ್ದು, ಈ ಹಿಂದೆಯೂ ಅಧ್ಯಕ್ಷರಾಗಿ ಆಡಳಿತ ನಡೆಸಿದ ಅನುಭವ ಇರುವ ನಳಿನಿ ಅವರಿಗೆ ಪ್ರಥಮ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ನೀಡಲು ಪಕ್ಷ ನಿರ್ಧರಿಸಿದ್ದು, ೨ನೇ ಅವಧಿಗೆ ಪಿ.ಕೆ. ಚಂದ್ರುಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಒಡಂಬಡಿಕೆಯಾಗಿತ್ತು.
ಅದರಂತೆ ನಳಿನಿ ಗಣೇಶ್ ಅವರಿಗೆ ಪ್ರಾರಂಭದ ೧೨ ತಿಂಗಳು, ನಂತರದ ೧೮ ತಿಂಗಳು ಪಿ.ಕೆ. ಚಂದ್ರು ಅವರಿಗೆ ಅವಕಾಶ ಕಲ್ಪಿಸುವ ಬಗ್ಗೆ ಬಿಜೆಪಿ ವರಿಷ್ಠರು ತೀರ್ಮಾನ ಕೈಗೊಂಡಿದ್ದರಿAದ ಪಿ.ಕೆ. ಚಂದ್ರು ಅವರು ಈ ಹಿಂದೆ ನಡೆದ ಅಧ್ಯಕ್ಷರ ಆಯ್ಕೆಯ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.
ಇದೀಗ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಪಿ.ಕೆ. ಚಂದ್ರು ಅವರೇ ಅಧ್ಯಕ್ಷರಾಗುವ ಸನ್ನಿವೇಶ ನಿರ್ಮಾಣಗೊಂಡಿದ್ದು, ಈಗಾಗಲೇ ಮರ‍್ನಾಲ್ಕು ಬಾರಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಧ್ಯಕ್ಷರ ಆಯ್ಕೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ. ಆದರೆ ಈವರೆಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ಯಾವುದೇ ಸೂಚನೆ ಬಂದಿಲ್ಲ.
ಈ ನಡುವೆ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿರುವ ಸಂಜೀವ ಅವರೇ ಕಾರ್ಯಕಲಾಪಗಳ ಉಸ್ತುವಾರಿ ವಹಿಸಿದ್ದು, ಒಂದಿಷ್ಟು ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದ್ದಾರೆ. ಕರ್ಕಳ್ಳಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಜಾಗ ಮೀಸಲಿರಿಸಿರುವುದು, ಜೇಸೀ ವೇದಿಕೆ ಎದುರು ನೆನೆಗುದಿಗೆ ಬಿದ್ದಿದ್ದ ಸಭಾಂಗಣವನ್ನು ಸುಸಜ್ಜಿತವಾಗಿ ನಿರ್ಮಾಣಗೊಳ್ಳುವಂತೆ ಕ್ರಮವಹಿಸಿರುವುದು, ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಉಪ ಚುನಾವಣೆಯಿಂದ ಪಂಚಾಯಿತಿಯಲ್ಲಿ ಬಿಜೆಪಿಗೆ ಒಂದು ಸ್ಥಾನ ಹೆಚ್ಚುವರಿಯಾಗಿ ಲಭಿಸಿದ್ದರೆ, ಕಾಂಗ್ರೆಸ್ ೧ ಸ್ಥಾನ ಕಳೆದುಕೊಂಡಿದೆ. ಆ ಮೂಲಕ ಪ.ಪಂ.ನಲ್ಲಿ ೫ ಬಿಜೆಪಿ(ಪಕ್ಷೇತರ ಸದಸ್ಯ ಬಿಜೆಪಿ ಬೆಂಬಲಿಸಿದ್ದಾರೆ) ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ೩ ಸ್ಥಾನದಲ್ಲಿ ಜಯಗಳಿಸಿವೆ. ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಸಂಜೀವ ಆಯ್ಕೆಯಾಗಿದ್ದು, ಒಂದು ವೇಳೆ ಉಪಾಧ್ಯಕ್ಷ ಸ್ಥಾನವನ್ನೂ ಬಿಜೆಪಿ ಪಡೆಯಲು ಮುಂದಾದರೆ ಶಾಸಕರು ಹಾಗೂ ಸಂಸದರ ಮತಗಳ ಅವಶ್ಯಕತೆಯಿದೆ.
ಒಟ್ಟಾರೆ ಕಳೆದ ೪ ತಿಂಗಳಿನಿAದ ಪ.ಪಂ. ಅಧ್ಯಕ್ಷರ ಸ್ಥಾನ ತೆರವಾಗಿದ್ದು, ಆದಷ್ಟು ಶೀಘ್ರ ಆಯ್ಕೆ ಪ್ರಕ್ರಿಯೆ ನಡೆಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯರುಗಳು ಒತ್ತಾಯಿಸಿದ್ದಾರೆ.