ಮಡಿಕೇರಿ, ಸೆ. ೨೩: ಕೊಡಗು ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ನಕಲಿ ನೇಮಕಾತಿ ಆದೇಶವನ್ನು ನೀಡಿ ಗ್ರಾಮಲೆಕ್ಕಿಗರ ಹುದ್ದೆಗೆ ನೇಮಿಸಲು ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ರೂ. ೧.೫೦ ಲಕ್ಷ ಹಣವನ್ನು ನೀಡುವಂತೆ ಕೇಳುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ರೀತಿಯ ಮೋಸದ ಜಾಲಕ್ಕೆ ಸಾರ್ವಜನಿಕರು ಸಿಲುಕಿಕೊಳ್ಳದಂತೆ ಎಚ್ಚರವಹಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಜಾಲದಲ್ಲಿ ತೊಡಗಿಸಿಕೊಂಡವರು ಜಿಲ್ಲಾಡಳಿತದ ಲಾಂಛನವನ್ನು ಪತ್ರದಲ್ಲಿ ನಮೂದಿಸಿ, ಜಿಲ್ಲಾಧಿಕಾರಿಯೇ ಪತ್ರ ಕಳುಹಿಸಿರುವಂತೆ ನಕಲು ಮಾಡಿಸಾರ್ವಜನಿಕ ರೋರ್ವರ ಮನೆ ವಿಳಾಸ ಸಮೇತ ಅಂಚೆ ಮೂಲಕÀ ನಕಲಿ ನೇಮಕಾತಿ ಆದೇಶವನ್ನು ಕಳುಹಿಸಿದ್ದಾರೆ. ನಂತರ ಕರೆ ಮೂಲಕ ರೂ. ೧.೫೦ ಲಕ್ಷ ಬೇಡಿಕೆ ಕೂಡ ನೀಡಿದ್ದಾರೆ. ನಕಲಿ ಪತ್ರ ದೊರೆತ ಸಾರ್ವಜನಿಕರೋರ್ವರು ಇದು ಅಧಿಕೃತವಾಗಿದೆಯಾ ಎಂಬುದನ್ನು ಪರಿಶೀಲಿಸುವ ಸಲುವಾಗಿ ಜಿಲ್ಲಾಡಳಿತದ ಗಮನಕ್ಕೆ ತಂದಾಗ ಮೋಸದ ಜಾಲದ ಕುರಿತು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಾಧಿಕಾರಿಗಳ ಹುದ್ದೆಗಳನ್ನು ತುಂಬಲು ಪ್ರಸ್ತುತ ಜಿಲ್ಲಾಡಳಿತದಿಂದ ಯಾವುದೇ ಅಧಿಸೂಚನೆಯನ್ನು ಹೊರಡಿಸಿರುವುದಿಲ್ಲ. ಖಾಲಿ ಇರುವ ಗ್ರಾಮಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವುದಿದ್ದಲ್ಲಿ ನಿಯಮಾನುಸಾರ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಪ್ರಚಾರ ನೀಡಿ, ಆನ್ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಆದ್ದರಿಂದ ಈ ರೀತಿಯ ನಕಲಿ ನೇಮಕಾತಿ ಪತ್ರ ನೀಡುವ ಜಾಲಕ್ಕೆ ಸಾರ್ವಜನಿಕರು ಹಣ ನೀಡಿ ಮೋಸ ಹೋಗಬಾರದೆಂದು ಜಿಲ್ಲಾಡಳಿತ ವಿನಂತಿಸಿದೆ.
ಈ ರೀತಿ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಿ ಕೊಡುವುದಾಗಿ ನಂಬಿಸಿ ಸಾರ್ವಜನಿಕರನ್ನು ವಂಚಿಸುತ್ತಿರುವ ಜಾಲವನ್ನು ಪತ್ತೆಹಚ್ಚಿ ನಿಯಮಾನುಸಾರ ಸೂಕ್ತ ಕ್ರಮ ವಹಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.
ಹಾಗೆಯೇ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಿ ಕೊಡುವುದಾಗಿ ಯಾವುದೇ ಅನಾಮಧೇಯ ಕರೆಗಳು ಬಂದಲ್ಲಿ ತಕ್ಷಣವೇ ಜಿಲ್ಲಾಧಿಕಾರಿಗಳ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಿ ಮಾಹಿತಿ ನೀಡಲು ಕೋರಿದೆ. ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಂ:೦೮೨೭೨-೨೨೫೫೦೦ ನ್ನು ಸಂಪರ್ಕಿಸಬೇಕಾಗಿ ಜಿಲ್ಲಾಧಿಕಾರಿ ಪ್ರಕಣೆಯ ಮೂಲಕ ಕೋರಿದ್ದಾರೆ.