ಮಡಿಕೇರಿ, ಸೆ. ೨೩: ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಪಾಲಿಬೆಟ್ಟ ಸಮಿತಿ ಸಭೆಯನ್ನು ನಡೆಸಲಾಯಿತು. ಸಮಿತಿಯ ಅಧ್ಯಕ್ಷ ಡಾ. ಅಜ್ಜಿನಿಕಂಡ ಸಿ. ಗಣಪತಿ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ವನ್ಯಪ್ರಾಣಿ - ಮಾನವನ ನಡುವಿನ ಸಂಘರ್ಷ ಪರಿಹಾರಕ್ಕಾಗಿ ಗ್ರಾಮ ಪಂಚಾಯಿತಿ ಮುಖಾಂತರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮನವಿ ಸಲ್ಲಿಸಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವ ಬಗ್ಗೆ ಚರ್ಚಿಸಲಾಯಿತು.

ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ ರಸ್ತೆಯ ಪುನರ್ ಡಾಂಬರೀಕರಣ ಮಾಡಬೇಕು, ಪಾಲಿಬೆಟ್ಟ ಪಟ್ಟಣದಲ್ಲಿ ಬೀಡಾಡಿ ದಿನಗಳ ಹಾವಳಿ ನಿಯಂತ್ರಿ ಸುವಂತೆ ರಸ್ತೆ ಬದಿ ವ್ಯಾಪಾರಿಗಳ ಸ್ಥಳಾಂತರ ಮಾಡು ವಂತೆ, ಸಾರ್ವಜನಿಕ ಶೌಚಾಲಯ ಶುಚಿತ್ವ ಕಾಪಾಡುವಂತೆ, ವ್ಯವಸ್ಥಿತ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಮುಖ್ಯರಸ್ತೆ ಬದಿಯಲ್ಲಿ ಖಾಸಗಿಯವರಿಂದ ದನದ ಕೊಟ್ಟಿಗೆ ನಿರ್ಮಾಣ ತೆರವುಗೊಳಿಸುವಂತೆ ಒತ್ತಾಯಿಸಿ ಸಭೆಯ ನಂತರ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರ, ಅಭಿವೃದ್ಧಿ ಅಧಿಕಾರಿ ವಿಶ್ವನಾಥ, ಉಪಾಧ್ಯಕ್ಷೆ ಪವಿತ್ರ, ಪಂಚಾಯಿತಿ ಸದಸ್ಯರು ಹಾಜರಿದ್ದು, ಮನವಿ ಸ್ವೀಕರಿಸಿ, ಕೂಡಲೇ ಸ್ಪಂದಿಸುವ ಭರವಸೆ ನೀಡಿದರು. ಬೆಳೆಗಾರರ ಒಕ್ಕೂಟದ ಖಜಾಂಚಿ ಬಿದ್ದಂಡ ಪಿ. ಗಣಪತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಲಯನ್ಸ್ ಮಾಜಿ ಅಧ್ಯಕ್ಷ ಪೈಕೆರ ಅನಂತರಾಮ್ ಮತ್ತು ಬೆಳೆಗಾರ ಸದಸ್ಯರು ಭಾಗವಹಿಸಿದ್ದರು.