ಮಡಿಕೇರಿ, ಸೆ. ೨೨: ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿ ಹಕ್ಕು ವಿನಾಯಿತಿ ಕುರಿತಾದ ವಿವಾದಕ್ಕೆ ತೆರೆಬಿದ್ದಿದೆ. ಈ ವಿಶೇಷ ಹಕ್ಕನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ವಜಾಗೊಳಿಸಿದೆ. ವಿನಾಯಿತಿಯನ್ನು ಮುಂದುವರಿಸುವ ಮೂಲಕ ಐತಿಹಾಸಿಕವಾದ ತೀರ್ಪು ನೀಡಿದೆ.

ಕೋವಿ ಹಕ್ಕು ವಿನಾಯಿತಿಯನ್ನು ಪ್ರಶ್ನಿಸಿ ಕೊಡಗಿನವರೇ ಆದ ನಿವೃತ್ತ ಕ್ಯಾಪ್ಟನ್ ಯಾಲದಾಳು ಕೆ. ಚೇತನ್ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಹಿಂದೆಯೂ ಇವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದು, ಆ ಸಂದರ್ಭದಲ್ಲೂ ಅವರ ಬೇಡಿಕೆ ಪುರಸ್ಕೃತವಾಗಿರಲಿಲ್ಲ. ಈ ಬಗ್ಗೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ನೀಡಿದ್ದ ಸೂಚನೆಯಂತೆ ಕೇಂದ್ರ ಗೃಹ ಇಲಾಖೆಯನ್ನು ೨೦೨೯ರ ಅಕ್ಟೋಬರ್ ತನಕವೂ ಮುಂದುವರಿಸಿತ್ತು. ಇದೀಗ ಕೆಲ ದಿನಗಳ ಹಿಂದೆ ಚೇತನ್ ಇದನ್ನು ಮರು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಇದರ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

ಇಂದು ಈ ವಿವಾದಕ್ಕೆ ಸಂಬAಧಿಸಿದAತೆ ತೀರ್ಪನ್ನು ಪ್ರಕಟಿಸಲಾಗಿದ್ದು, ಕೋವಿ ವಿನಾಯಿತಿ ಹಕ್ಕು ಮುಂದುವರಿಕೆಯನ್ನು ಸಮರ್ಥಿಸಲಾಗಿದ್ದು, ಐತಿಹಾಸಿಕವಾದ ನಿರ್ಣಯ ಹೊರಬಿದ್ದಿದೆ.

ರಾಜ್ಯ ಉಚ್ಚ ನ್ಯಾಯಾಲಯದ ಚೀಫ್ ಜಸ್ಟೀಸ್ ಸತೀಶ್ ಚಂದ್ರಶರ್ಮ ಹಾಗೂ ಜಸ್ಟೀಸ್ ಸಚಿನ್ ಮುಗ್ದುರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ. ಅರ್ಜಿದಾರರು ವಾದಿಸಿದ್ದಂತೆ ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ ನೀಡಲಾಗಿರುವ ಈ ವಿಶೇಷ ವಿನಾಯಿತಿಯಿಂದ ಸಂವಿಧಾನಾತ್ಮಕವಾಗಿ ಯಾವದೇ ತೊಡಕಾಗಿಲ್ಲ. ಇದು ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕವಾಗಿಯೇ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸ್ವಾತಂತ್ರö್ಯ ಪೂರ್ವ ಹಾಗೂ ಸ್ವಾತಂತ್ರö್ಯ ನಂತರದಲ್ಲೂ ಮಾರ್ಷಿಯಲ್ ರೇಸ್ ಆಗಿ ಈ ಜನಾಂಗ ಗುರುತಿಸಲ್ಪಟ್ಟಿದೆ. ಕೋವಿಯನ್ನು ಇವರು ನಂಬಿಕೆಯಿAದ ನೋಡುವದಲ್ಲದೆ ಪೂಜಿಸಿಕೊಂಡು ಬರುತ್ತಿದ್ದಾರೆ. ಹಲವಾರು ವರ್ಷಗಳಿಂದ ಮುಂದುವರಿದುಕೊAಡು ಬಂದಿರುವ ಈ ವಿನಾಯಿತಿಯನ್ನು ಪ್ರಶ್ನಿಸಿರುವದರಲ್ಲಿ ಯಾವದೇ ಹಿತಾಸಕ್ತಿ ಅಡಗಿಲ್ಲ. ಎಲ್ಲೂ ಅನುಚ್ಚೇದ ೧೪ರ ನಿಯಮ ಉಲ್ಲಂಘನೆಯಾಗಿಲ್ಲ. ಐತಿಹಾಸಿಕವಾಗಿಯೇ ಕೊಡವರು ಸೈನಿಕ ಪರಂಪರೆಯನ್ನು ಹೊಂದಿರುವದು ಗಮನಾರ್ಹವಾಗಿದೆ ಎಂದು ನ್ಯಾಯಾಲಯ ಪ್ರತಿವಾದಿಗಳ ವಾದವನ್ನು ಪುರಸ್ಕರಿಸಿ ಆದೇಶ ಪ್ರಕಟಿಸಿದೆ.

ಪ್ರಮುಖ ಅಂಶಗಳು

ನ್ಯಾಯಾಲಯ ತನ್ನ ತೀರ್ಪಿನಲ್ಲಿ ಪ್ರಕಟಿಸಿರುವ ಆದೇಶದಲ್ಲಿನ ಕೆಲವು ಪ್ರಮುಖ ಅಂಶಗಳು ಇಂತಿವೆ. ಸ್ವಾತಂತ್ರö್ಯ ಪೂರ್ವದಲ್ಲೂ ಹಾಗೂ ನಂತರದಲ್ಲೂ ಐತಿಹಾಸಿಕವಾಗಿ ಈ ಜನಾಂಗ ಮಾರ್ಷಿಯಲ್ ರೇಸ್ ಆಗಿ ಗುರುತಿಸಲ್ಪಟ್ಟಿದೆ. ಶಸ್ತಾçಸ್ತç ಕಾಯ್ದೆಯ ಪ್ರಕಾರ ನೀಡಲಾಗಿರುವ ಈ ವಿಶೇಷ ಅವಕಾಶದ ವಿನಾಯಿತಿಯಿಂದ ಎಲ್ಲೂ ತೊಡಕಾಗಿಲ್ಲ. ಈ ವಿನಾಯಿತಿ ಜನಾಂಗೀಯ ತಾರತಮ್ಯ ಮೂಡಿಸುತ್ತಿದೆ ಎಂಬದು ತಪ್ಪು ಅಭಿಪ್ರಾಯವಾಗಿದೆ. ಅನುಚ್ಚೇದ ೧೪ರ ಉಲ್ಲಂಘನೆ ಈ ವಿನಾಯಿತಿಯ ಮೂಲಕ ಆಗಿಲ್ಲ. ಕೋವಿಯನ್ನು ಪೂಜಿಸಿಕೊಂಡು ಬರುತ್ತಿರುವದು ನಂಬಿಕೆ ಪ್ರತೀಕವಾಗಿ ಹಾಗೂ ಸಂಪ್ರದಾಯಬದ್ದವಾಗಿ ನಡೆದುಕೊಂಡು ಬರುತ್ತಿದೆ. ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕವಾಗಿ ನೀಡಲಾಗಿರುವ ಈ ವಿನಾಯಿತಿ ಸಮಂಜಸವಾಗಿಯೇ ಇದೆ. ಇದನ್ನು ಕೇಂದ್ರ ಗೃಹ ಇಲಾಖೆ ೨೦೨೯ರ ತನಕ ಮುಂದುವರಿಸಿರುವುದು ಕಾನೂನು ಬದ್ಧವಾಗಿದೆ ಎಂಬ ಅಭಿಪ್ರಾಯದೊಂದಿಗೆ ನ್ಯಾಯಾಲಯ ವಿನಾಯಿತಿ ಮುಂದುವರಿಕೆಯನ್ನು ಎತ್ತಿ ಹಿಡಿದಿದೆ.

ಕಾನೂನು ತಜ್ಞರ ಹೋರಾಟ

ನಿವೃತ್ತ ಕ್ಯಾಪ್ಟನ್ ವೈ.ಕೆ. ಚೇತನ್ ವಿನಾಯಿತಿ ಹಕ್ಕನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಬಳಿಕ ಇದರಲ್ಲಿ ತಮ್ಮನ್ನು ಪ್ರತಿವಾದಿಗಳನ್ನಾಗಿ ಪರಿಗಣಿಸುವಂತೆ ಕೋರಿ ಅಖಿಲ ಕೊಡವ ಸಮಾಜ, ಫೆಡರೇಷನ್ ಆಫ್ ಕೊಡವ ಸಮಾಜ, ಬೆಂಗಳೂರ್ ಕೊಡವ ಸಮಾಜ, ಮಡಿಕೇರಿ ಕೊಡವ ಸಮಾಜ, ಸಿಎನ್‌ಸಿ, ಯುಕೋ ಸೇರಿದಂತೆ ವಿವಿಧ ಸಮಾಜ, ಸಂಘಟನೆಗಳು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪ್ರತಿವಾದಿಗಳಾಗಿದ್ದರು. ಇವರ ಪರವಾಗಿ ವಕೀಲರುಗಳ ತಂಡವೇ ಕಾನೂನು ಹೋರಾಟ ನಡೆಸಿದ್ದು, ನ್ಯಾಯಾಲಯಕ್ಕೆ

(ಮೊದಲ ಪುಟದಿಂದ) ಸೂಕ್ತ ದಾಖಲೆಗಳ ಮೂಲಕ ಮನವರಿಕೆ ಮಾಡುವ ಪ್ರಯತ್ನ ನಡೆಸಿತ್ತು. ಇದೀಗ ಈ ಕಾನೂನು ಹೋರಾಟಕ್ಕೆ ಯಶಸ್ಸು ಲಭಿಸಿದ್ದು, ಕೊಡವ ಜನಾಂಗದವರು ಸೇರಿದಂತೆ ಜಮ್ಮಾಹಿಡುವಳಿದಾರರಲ್ಲಿ ತೀರ್ಪಿನ ಬಗ್ಗೆ ಅಪಾರ ಸಂತಸ ವ್ಯಕ್ತಗೊಂಡಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ವಕೀಲ ಪೊನ್ನಣ್ಣ ಹಾಗೂ ಇತರರು ಮಾಹಿತಿ ನೀಡಿದರು.

ಪ್ರಮುಖ ವಕೀಲರುಗಳು

ಈ ಕುರಿತಾಗಿ ಹಿರಿಯ ವಕೀಲರುಗಳಾದ ಮೇರಿಯಂಡ ಸಜನ್ ಪೂವಯ್ಯ, ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮುಕ್ಕಾಟಿರ ಟಿ. ನಾಣಯ್ಯ, ಮಾಳೇಟಿರ ಧ್ಯಾನ್ ಚಿಣ್ಣಪ್ಪ, ಮಲ್ಲೇಂಗಡ ಗಗನ್ ಬೆಳ್ಯಪ್ಪ ಅವರುಗಳೊಂದಿಗೆ ಐಚೆಟ್ಟಿರ ರಾಲಿ ಮುದ್ದಪ್ಪ, ಐತಿಚಂಡ ಎಂ. ದೇವಯ್ಯ, ಕಾಂಗೀರ ಭೀಮಯ್ಯ, ಚೆಪ್ಪುಡಿರ ಪೂಣಚ್ಚ, ಕಾಳೇಂಗಡ ಸರೋಜಿನಿ, ಕಾರೋಟಿರ ಪೆಮ್ಮಯ್ಯ, ಬೊಳ್ಳಾರ್‌ಪಂಡ ಬೋಪಣ್ಣ, ಮಣವಟ್ಟಿರ ಅವಿನ್ ಸುಬ್ರಮಣಿ, ಚಂದಪAಡ ನರೇನ್ ಸೇರಿದಂತೆ ಹಲವು ವಕೀಲರ ತಂಡ ಕಾನೂನು ಪ್ರಯತ್ನ ನಡೆಸಿತ್ತು. ವಾದಿಯ ಪರವಾಗಿ ವಕೀಲರಾದ ವಿದ್ಯುಲ್ಲತಾ ವಾದ ಮಂಡಿಸಿದ್ದರು.

ತೀರ್ಪಿನ ಬಗ್ಗೆ ಸ್ವಾಗತ

ನ್ಯಾಯಾಲಯದ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಈ ಬಗ್ಗೆ ಅಪಾರ ಸಂತಸ ಕಂಡು ಬಂದಿದೆ. ಅ.ಕೊ.ಸ., ಬೆಂಗಳೂರು ಕೊಡವ ಸಮಾಜ, ಮಡಿಕೇರಿ ಸಮಾಜ, ಸಿಎನ್‌ಸಿ ಸೇರಿದಂತೆ ವಿವಿಧ ಸಮಾಜ, ಸಂಘಟನೆ, ಜನತೆ ಈ ಬಗ್ಗೆ ಸ್ವಾಗತ ವ್ಯಕ್ತಪಡಿಸಿದ್ದು, ವಕೀಲರ ತಂಡದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದೆ. ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಆಗಸಕ್ಕೆ ಗುಂಡು ಹಾರಿಸುವ ಮೂಲಕ ತೀರ್ಪನ್ನು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಅಖಿಲ ಕೊಡವ ಸಮಾಜ

ಕೋವಿ ಹಕ್ಕನ್ನು ಯಥಾಸ್ಥಿತಿಯಲ್ಲಿ ಕಾಯ್ದಿರಿಸುವಂತೆ ಆದೇಶ ನೀಡಿರುವುದು ನ್ಯಾಯಯುತವಾಗಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗ ಸಂಸ್ಥೆಗಳು ಸಂತೋಷ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದು, ಸಾಂವಿಧಾನಿಕ ಹಾಗೂ ಸೈನಿಕ ಪರಂಪರೆಯ ಮಹತ್ವ ಉಳ್ಳ ಈ ಕಾನೂನು ಹೋರಾಟದಲ್ಲಿ ಭಾಗಿಯಾದ ಎಲ್ಲಾ ವಕೀಲ ಮಿತ್ರರನ್ನು ಹಾಗೂ ಸಂಘ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ.

ಮಡಿಕೇರಿ ಸಮಾಜ

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಕಾರ್ಯದರ್ಶಿ ಅರೆಯಡ ರಮೇಶ್ ಹಾಗೂ ಪದಾಧಿಕಾರಿಗಳು ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ವಕೀಲರುಗಳ ಪಾತ್ರವನ್ನು ಶ್ಲಾಘಿಸಿದ್ದಾರೆ.

ಬೆಂಗಳೂರು ಸಮಾಜ

ಬೆಂಗಳೂರು ಕೊಡವ ಸಮಾಜದ ಉಪಾಧ್ಯಕ್ಷರಾದ ಮಲ್ಲೇಂಗಡ ಮೀರಜಲಜಕುಮಾರ್ ಹಾಗೂ ಪದಾಧಿಕಾರಿಗಳು ವಕೀಲರ ತಂಡದ ಪ್ರಮುಖರು ಹಾಗೂ ಬೆಂಗಳೂರು ಸಮಾಜದ ಲೀಗಲ್ ಟೀಂನ ಪ್ರಯತ್ನವನ್ನು ಸ್ಮರಿಸಿದ್ದಾರೆ.

ಪೊನ್ನಂಪೇಟೆ ಕೊಡವ ಸಮಾಜ ಮನವಿ

ಕೊಡವರು ಹಾಗೂ ಜಮ್ಮಾಹಿಡುವಳಿದಾರರ ಕೋವಿ ಹಕ್ಕನ್ನು ಎತ್ತಿ ಹಿಡಿದಿರುವ ನ್ಯಾಯಾಲಯದ ತೀರ್ಪು ಸ್ವಾಗತಾರ್ಹವೆಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್ ಬೋಪಯ್ಯ, ಕೊಡವರ ಜನ್ಮ ಸಿದ್ಧ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಬಾರದೆಂದು ಮನವಿ ಮಾಡಿದ್ದಾರೆ. ಕಾನೂನಿನ ಚೌಕಟ್ಟಿನಡಿ ಕೊಡವರ ಹಕ್ಕಿಗಾಗಿ ನಡೆಯುವ ಹೋರಾಟಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.