ಕೂಡಿಗೆ, ಸೆ. ೨೧: ಹಾರಂಗಿಯಲ್ಲಿರುವ ಮೀನು ಮರಿ ಉತ್ಪಾದನಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದಲ್ಲಿ ಮಹಶೀರ್ ಮೀನು ಮರಿಗಳ ಉತ್ಪಾದನೆ ಮಾಡಿ ತೋಟಗಳಲ್ಲಿ ಸಾಕುತ್ತಿರುವುದನ್ನು ವೀಕ್ಷಿಸಿದರು.
ಅಲ್ಲದೆ ಮಹಶೀರ್ ಮೀನುಗಳ ಸಂವರ್ಧನೆ, ಉತ್ಪಾದನೆ ಹಾಗೂ ಪಾಲನೆ ಚಟುವಟಿಕೆಗಳ ವೀಕ್ಷಣೆ, ಕಾಟ್ಲಾ, ರೋಹು, ಮೃಗಲ್ ಹುಲ್ಲುಗೆಂಡೆ, ಸಾಮಾನ್ಯ ಗೆಂಡೆ ತಳಿಗಳ ಘಟಕದ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದರು. ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ದರ್ಶನ್, ಹಾರಂಗಿ ಮೀನುಗಾರಿಕೆ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.