ಸಿಲಿಂಡರ್ ಸ್ಫೋಟದಿಂದ ಬೆಂಕಿ; ಇಬ್ಬರು ಸಜೀವ ದಹನ
ಬೆಂಗಳೂರು, ಸೆ. ೨೧: ನಗರದ ದೇವರಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್ ಮೆಂಟ್ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ. ಸಂಜೆ ೪.೧೫ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಇಬ್ಬರು ಸಜೀವ ದಹನವಾಗಿದ್ದು ಹಲವರಿಗೆ ಸುಟ್ಟ ಗಾಯಗಳಾಗಿವೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಅಕ್ಕಪಕ್ಕದ ಮನೆಗಳಿಗೂ ಹಬ್ಬಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಅಗ್ನಿ ಅವಘಡದಲ್ಲಿ ಗಾಯ ಗೊಂಡಿರುವ ಆರು ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲಿಬಾನಿಗಳನ್ನು ಹತ್ಯೆಗೈದ ಐಸಿಸ್ ಉಗ್ರರು!
ಕಾಬೂಲ್, ಸೆ. ೨೧: ಅಫ್ಫಾನಿಸ್ತಾನದಲ್ಲಿ ಸರಕಾರ ರಚಿಸಿರುವ ತಾಲಿಬಾನ್ಗೆ ಈಗ ಐಸಿಸ್ ಉಗ್ರ ಸಂಘಟನೆಯೇ ತಲೆನೋವಾಗಿದೆ. ಕಳೆದ ಶನಿವಾರ ಹಾಗೂ ಭಾನುವಾರ ನಡೆದ ಸರಣಿ ಬಾಂಬ್ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದ್ದಲ್ಲದೆ, ಎರಡು ದಿನಗಳ ದಾಳಿಯಲ್ಲಿ ೩೫ಕ್ಕೂ ಹೆಚ್ಚು ತಾಲಿಬಾನಿಗಳನ್ನು ಹತ್ಯೆಗೈಯಲಾಗಿದೆ ಎಂದು ತಿಳಿಸಿದೆ. ಆ ಮೂಲಕ ಅಫ್ಫಾನಿಸ್ತಾನದಲ್ಲೀಗ ಉಗ್ರರ ಮಧ್ಯೆಯೇ ಕಾಳಗ ಏರ್ಪಟ್ಟಂತಾಗಿದೆ. ನಂಗರ್ಹಾರ್ ಕಣಿವೆಯ ಜಲಾಲಾಬಾದ್ನಲ್ಲಿ ಶನಿವಾರ ಹಾಗೂ ಭಾನುವಾರ ತಾಲಿಬಾನ್ ಉಗ್ರರನ್ನು ಗುರಿಯಾಗಿಸಿ ದಾಳಿ ಮಾಡಿದ್ದೇವೆ. ದಾಳಿಯಲ್ಲಿ ೩೫ಕ್ಕೂ ಹೆಚ್ಚು ತಾಲಿಬಾನಿಗಳು ಮೃತಪಟ್ಟಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ ಎಂಬುದಾಗಿ ಐಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ. ನಂಗರ್ಹಾರ್ ಕಣಿವೆಯು ಐಸಿಸ್ ಖೋರಾಸಾನ್ ಉಗ್ರರ ಹಿಡಿತದಲ್ಲಿದ್ದು, ಶನಿವಾರ ಜಲಾಲಾಬಾದ್ನ ಮೂರು ಕಡೆ ತಾಲಿಬಾನಿಗಳು ಹಾಗೂ ಅವರ ವಾಹನಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಭಾನುವಾರ ಸಹ ಇದೇ ನಗರದಲ್ಲಿ ದಾಳಿ ನಡೆಸಲಾಗಿದೆ. ತಾಲಿಬಾನ್ ದಾಳಿ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಫ್ಘನ್ ಮೇಲೆ ತಾಲಿಬಾನ್ ಉಗ್ರ ಸಂಘಟನೆಯೇ ಹಿಡಿತ ಸಾಧಿಸಿರುವುದನ್ನು ಬೇರೆ ಉಗ್ರ ಸಂಘಟನೆಗಳಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ತಾಲಿಬಾನಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ.
ಮೇಲ್ಮನೆಯಲ್ಲಿ ಮುಡಾ ವಿಚಾರವಾಗಿ ಪ್ರತಿಪಕ್ಷದಿಂದ ಗದ್ದಲ
ಬೆಂಗಳೂರು, ಸೆ. ೨೧: ಮೈಸೂರು ಅಭಿವೃದ್ಧಿ ಪ್ರಾಧಿಕಾರ ರೈತರು ಹಾಗೂ ಭೂ ಮಾಲೀಕರ ಜಮೀನು ಅಥವಾ ನಿವೇಶನಗಳನ್ನು ಬಳಸಿಕೊಂಡು ಪರಿಹಾರ ನೀಡದೆ ಅನ್ಯಾಯ ಮಾಡುತ್ತಿರುವ ವಿಚಾರವಾಗಿ ಮಂಗಳವಾರ ಮೇಲ್ಮನೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು. ಪ್ರಶ್ನಾ ಅವಧಿಯಲ್ಲಿ ಈ ಕುರಿತು ಶಾಸಕ ಮರಿತಿಬ್ಬೇಗೌಡ ಪ್ರಸ್ತಾಪಿಸಿದರು. ಈ ವೇಳೆ ಬಡಾವಣೆ ಅಭಿವೃದ್ಧಿಗಾಗಿ ಕೆಲವು ಪ್ರಕರಣಗಳಲ್ಲಿ ಪರಸ್ಪರ ಒಪ್ಪಂದದ ಅಡಿ ಭೂಮಿ ವಶಪಡಿಸಿಕೊಂಡು ಬಡಾವಣೆಗಳನ್ನು ನಿರ್ಮಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಉತ್ತರಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಭೂ ಸ್ವಾಧೀನವಾಗದ ಪ್ರದೇಶಗಳನ್ನು ಬಳಸಿಕೊಂಡಿದ್ದಲ್ಲಿ, ಪರಿಹಾರ ನೀಡಲಾಗುತ್ತಿದೆ ಎಂದರು. ಆದರೆ ಸಚಿವರು ನೀಡಿರುವುದು ತಪ್ಪು ಉತ್ತರ. ೧೦ ರಿಂದ ೨೦ ವರ್ಷಗಳ ಹಿಂದೆ ರಸ್ತೆ ಮುಂತಾದ ಕಾರ್ಯಗಳಿಗೆ ಭೂ ಮಾಲೀಕರ ಅನುಮತಿಯಿಲ್ಲದೇ ಭೂಮಿ ಬಳಸಿಕೊಳ್ಳಲಾಗಿದೆ. ಸಾವಿರಾರು ರೈತರಿಗೆ ಅನ್ಯಾಯವಾಗಿದೆ ಎಂದು ಶಾಸಕ ಮರಿತಿಬ್ಬೇಗೌಡ ಹಾಗೂ ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿರು. ಒಂದು ಹಂತದಲ್ಲಿ ಮರಿತಿಬ್ಬೇಗೌಡ ಸಭಾಧ್ಯಕ್ಷರ ಪೀಠದ ಬಳಿ ಧಾವಿಸಿ ಮುಡಾದಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆಯಡಿ ಪರಿಹಾರ ಒದಗಿಸುವ ಕುರಿತು ಒತ್ತಾಯಿಸಿದರು.
ವಿವಿಧೆಡೆ ಸಿಸಿಬಿ ದಾಳಿ-ರೂ. ೨೫ ಲಕ್ಷ ವಶ
ಬೆಂಗಳೂರು, ಸೆ. ೨೧: ನಗರದ ಹಲವು ಅಕ್ರಮ ಚಟುವಟಿಕೆ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ. ಜೂಜು ಹಾಗೂ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ರೂ. ೨೫ ಲಕ್ಷ ಜಪ್ತಿ ಮಾಡಿಕೊಂಡಿದ್ದಾರೆ. ನಗರದ ಒಟ್ಟು ಐದು ಕಡೆ ದಾಳಿ ನಡೆಸಲಾಗಿದೆ. ಹೆಚ್ಎಎಲ್, ಕಾಮಾಕ್ಷಿಪಾಳ್ಯ, ಸಂಪೆಗೆಹಳ್ಳಿ, ವಿಜಯನಗರ, ಚಿಕ್ಕಜಾಲದಲ್ಲಿರುವ ಜೂಜು ಮತ್ತು ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಐದು ಕಡೆ ದಾಳಿ ವೇಳೆ ರೂ. ೨೫ ಲಕ್ಷ ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.