ಗೋಣಿಕೊಪ್ಪ ವರದಿ, ಸೆ. ೧೯: ಬಿರುನಾಣಿ ಗ್ರಾಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರು ಸೇರ್ಪಡೆಗೊಂಡಿಲ್ಲ ಎಂದು ಬಿರುನಾಣಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಅಣ್ಣಳಮಾಡ ರಾಯ್ ಚಿಣ್ಣಪ್ಪ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದವರನ್ನೇ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದಿದ್ದಾರೆ ಎಂಬ ತಪ್ಪು ಮಾಹಿತಿ ಮೂಲಕ ಪಕ್ಷದ ವರ್ಚಸ್ಸು ಕೆಡಿಸುವ ಪ್ರಯತ್ನ ನಡೆಸಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷದಿಂದ ಕಾರ್ಯಕ್ರಮ ನಡೆಸಿ ಸೇರಿಸಿಕೊಂಡಿರುವ ಕಾರ್ಯಕರ್ತರು ನಮ್ಮ ಸದಸ್ಯರಲ್ಲ. ಅನೇಕರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರು. ಕಳೆದ ಅವಧಿಯಲ್ಲಿ ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಬಿಟ್ಟಿಯಂಡ ತಂಬಿ ನಾಣಯ್ಯ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ತೊಡಗಿ ಉಚ್ಚಾಟನೆಗೊಂಡಿದ್ದಾರೆ. ಇವರೊಂದಿಗಿರುವವರು ಕೂಡ ಕಾಂಗ್ರೆಸ್‌ನಲ್ಲಿದ್ದಾರೆ. ರಾಜಕೀಯ ದುರುದ್ದೇಶದಿಂದ ಜನರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನ ನಡೆಯುತ್ತಿದೆ. ಬಿರುನಾಣಿ ವ್ಯಾಪ್ತಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಡೆಯುತ್ತಿದೆ. ಇಲ್ಲಿ ಪಕ್ಷದ ವರ್ಚಸ್ಸು ಇದೆ ಎಂದರು.
ಗೋಷ್ಠಿಯಲ್ಲಿ ಸಹಪ್ರಮುಖ್ ಬಿ.ಪಿ ರವೀಂದ್ರ, ಬಿರುನಾಣಿ ಗ್ರಾ. ಪಂ. ಅಧ್ಯಕ್ಷೆ ಎಂ.ಎA. ತಂಗಮ್ಮ, ತಾಲೂಕು ಬಿಜೆಪಿ ಕಾಫಿ ಪ್ರಕೋಷ್ಠ ಅಧ್ಯಕ್ಷ ಪೊನ್ನು ಮುತ್ತಪ್ಪ, ಬೂತ್ ಅಧ್ಯಕ್ಷ ಕಾಯಪಂಡ ಮಧು ಮೋಟಯ್ಯ ಇದ್ದರು.