ಗೋಣಿಕೊಪ್ಪಲು, ಸೆ. ೧೯: ಪೊನ್ನಂಪೇಟೆ ನೂತನ ತಾಲೂಕಿನ ವ್ಯಾಪ್ತಿಗೆ ಬರುವ ೪೯ ಮುಖ್ಯ ಗ್ರಾಮಗಳು ೨೨ ಉಪಗ್ರಾಮಗಳ ಜನತೆಗೆ ನೂತನ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲದೆ ಸವಲತ್ತುಗಳು ಹಾಗೂ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ ಎಂಬ ಬಗ್ಗೆ ವ್ಯಾಪಕ ಆರೋಪ ಕೇಳಿ ಬಂದಿದೆ.

ಹಲವು ವರ್ಷದ ಹೋರಾಟದ ಫಲವಾಗಿ ಪೊನ್ನಂಪೇಟೆ ನೂತನ ತಾಲೂಕು ಅಸ್ತಿತ್ವಕ್ಕೆ ಬಂದಿದೆ. ತಾಲೂಕು ರಚನೆಗೆ ಹಿರಿಯರು ಸೇರಿದಂತೆ ಅನೇಕ ಸಂಘ-ಸAಸ್ಥೆಗಳು ಹಾಗೂ ಜನಪ್ರತಿನಿಧಿಗಳು ದುಡಿದಿದ್ದರು. ಅಂತಿಮವಾಗಿ ತಾಲೂಕು ರಚನೆ ಘೋಷಣೆಯಾದ ತರುವಾಯ ೨೦೨೦ ಡಿಸಂಬರ್ ೧ ರಂದು ನೂತನ ತಾಲೂಕು ಕಚೇರಿಯು ಆರಂಭವಾಗಿದೆ. ನೂತನ ತಾಲೂಕು ಕಚೇರಿ ಆರಂಭವಾದ ನಂತರ ಗ್ರಾಮೀಣ ಭಾಗದ ಜನತೆಗೆ ಕೆಲಸ ಕಾರ್ಯಗಳು ಸುಲಲಿತ ವಾಗುತ್ತವೆ ಎಂಬ ಕನಸು ಕಂಡಿದ್ದ ಹೋರಾಟಗಾರರಿಗೆ ಇದೀಗ ನಿರಾಶೆಯಾಗಿದೆ. ಕಚೇರಿಗೆ

ಬೇಕಾದ ಪೀಠೋಪಕರಣಗಳು, ಕಂಪ್ಯೂಟರ್‌ಗಳು ವ್ಯವಸ್ಥೆಯಾಗಿದ್ದರೂ ಕೆಲಸ ನಿರ್ವಹಿಸಬೇಕಾದ ಸಿಬ್ಬಂದಿಗಳು ನೇಮಕವಾಗದೆ ತೊಂದರೆ ಎದುರಾಗಿದೆ.

ಇಲಾಖೆಯಿಂದ ಮಂಜೂರಾದ ೫ ಜನ ಗುಮಾಸ್ತರ ಹುದ್ದೆಗಳ ಪೈಕಿ ಓರ್ವ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಇತ್ತೀಚೆಗೆ ಬಡ್ತಿ ಹೊಂದಿ ವರ್ಗಾವಣೆ ಗೊಂಡಿದ್ದಾರೆ. ಒಬ್ಬರು ಶಿರೆಸ್ತದಾರರು ಮಾತ್ರ ಕೆಲಸ ನಿರ್ವಹಿಸುತ್ತಿದ್ದು ವೀರಾಜಪೇಟೆ ತಾಲೂಕಿನ ತಹಶೀಲ್ದಾರರು ಇಲ್ಲಿಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ‘ಡಿ’ ದರ್ಜೆ ನೌಕರರಾಗಲಿ, ಬೆರಳಚ್ಚು ಗಾರರಾಗಲಿ ಇನ್ನೂ ನೇಮಕಗೊಂಡಿಲ್ಲ.

ಹುದಿಕೇರಿ, ಬಾಳೆಲೆ, ಶ್ರೀಮಂಗಲ ಹಾಗೂ ಪೊನ್ನಂಪೇಟೆಯ ನಾಲ್ಕು ಹೋಬಳಿಗಳನ್ನು ಒಳಗೊಂಡಿರುವ ಈ ವ್ಯಾಪ್ತಿಯಲ್ಲಿ ೨೧ ಗ್ರಾಮ ಪಂಚಾಯಿತಿಗಳು ಸೇರಿವೆ. ನೂತನ ಕಚೇರಿಗೆ ಪ್ರಮುಖವಾಗಿ ನಾಗರಿಕರಿಗೆ ಅತ್ಯವಶ್ಯವಿರುವ ಆಹಾರ ಶಾಖೆ, ಭೂಮಾಪನ ಶಾಖೆಗಳು ತೆರೆಯಬೇಕಾಗಿದೆ. ಅಲ್ಲದೆ ಇದಕ್ಕೆ ಸಂಬAಧಿಸಿದ ಸಿಬ್ಬಂದಿಗಳ ನೇಮಕವಾಗಬೇಕಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ಸ್ಥಳೀಯ ಸಂಘ-ಸAಸ್ಥೆಗಳು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಇಲ್ಲಿಯ ತನಕ ಖಾಯಂ ತಹಶೀಲ್ದಾರರಾಗಲಿ, ಸಿಬ್ಬಂದಿಗಳಾಗಲಿ ನೇಮಕವಾಗಿಲ್ಲ.

ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುತ್ತಿರುವ ೨ ಜನ ಪ್ರಥಮ ದರ್ಜೆ ಗುಮಾಸ್ತರು ಹಾಗೂ ೩ ಮಂದಿ ದ್ವಿತೀಯ ದರ್ಜೆ ಸಹಾಯಕರನ್ನು ಪೊನ್ನಂಪೇಟೆ ತಾಲೂಕು ಕಚೇರಿಗೆ ವರ್ಗಾಯಿಸಿದಲ್ಲಿ ಸದ್ಯದ ಮಟ್ಟಿಗೆ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಲು ಸಾಧ್ಯವಾಗಲಿದೆ. ಪೊನ್ನಂಪೇಟೆ ತಾಲೂಕಿಗೆ ಸಂಬAಧಿಸಿದ ಭೂದಾಖಲೆ ಪತ್ರಗಳ ಮಾಹಿತಿಯನ್ನು ಬೆಂಗಳೂರಿನ ಭೂ ಮಾಪನ

(ಮೊದಲ ಪುಟದಿಂದ) ಕೇಂದ್ರದಲ್ಲಿ ಲಿಂಕ್ ಆಗಬೇಕಾಗಿದ್ದು ಈ ಪ್ರಸ್ತಾವನೆ ಪ್ರಗತಿಯಲ್ಲಿದೆ. ಪೊನ್ನಂಪೇಟೆ ತಾಲೂಕಿಗೆ ಸಂಬAಧಿಸಿದ ಭೂ ದಾಖಲೆಗಳು ಮತ್ತು ಕಡತಗಳನ್ನು ವೀರಾಜಪೇಟೆ ತಾಲೂಕು ಕಚೇರಿಯಿಂದ ತರಿಸಿ, ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ರಕ್ಷಿಸಿ ಇರುವ ಮೂರು ಭದ್ರತಾ ಕೊಠಡಿಯಲ್ಲಿ ಇಡಬೇಕಾಗಿದೆ. ಈ ದಾಸ್ತಾನು ಕೊಠಡಿಗೆ ಬೇಕಾದ ಆಲ್ಮೆರಾಗಳು ಮತ್ತು ರ‍್ಯಾಕ್ಸ್ಗಳು ಲಭ್ಯವಿದೆ.

ಜನರ ಅಲೆದಾಟ ತಪ್ಪಿಲ್ಲ

ಕುಗ್ರಾಮಗಳ ಜನತೆಗೆ ಅನುಕೂಲವಾಗಲು ನೂತನ ತಾಲೂಕು ರಚನೆಯಾಗಿದೆ. ತಾಲೂಕಿನ ಹೋರಾಟದಲ್ಲಿ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಹೋರಾಟ ನಡೆಸಿದ್ದಾರೆ. ಇದೀಗ ನೂತನ ತಾಲೂಕಿನ ಕಚೇರಿಯಲ್ಲಿ ಪಿಠೋಪಕರಣಗಳಿದ್ದರೂ ಮುಖ್ಯವಾಗಿ ಬೇಕಾದ ಕಚೇರಿ ಸಿಬ್ಬಂದಿಗಳು ಇನ್ನು ಕೂಡ ನೇಮಕವಾಗಿಲ್ಲ. ಇದರಿಂದ ಈ ಭಾಗದ ಜನರು ವೀರಾಜಪೇಟೆಯ ಕಚೇರಿಗೆ ತೆರಳುವುದು ಬಾಕಿ ಆಗಿಲ್ಲ. ಆದಷ್ಟು ಬೇಗನೇ ಜನಪ್ರತಿನಿಧಿಗಳು ಈ ಬಗ್ಗೆ ವಿಶೇಷ ಕಾಳಜಿವಹಿಸಿ ಖಾಯಂ ತಹಶೀಲ್ದಾರರು ಸೇರಿದಂತೆ ಸಿಬ್ಬಂದಿಗಳನ್ನು ನೇಮಕಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಒತ್ತಾಯಿಸಿದ್ದಾರೆ.

ಹಲವು ಬಾರಿ ಪತ್ರ ಬರೆಯಲಾಗಿದೆ

ಹಲವು ಕನಸುಗಳನ್ನು ಹೊತ್ತು ನೂತನ ತಾಲೂಕು ಕಚೇರಿ ಕಾರ್ಯಾರಂಭ ಮಾಡಿದೆ. ಇದೀಗ ವರ್ಷ ಕಳೆದರೂ ಕಚೇರಿಗೆ ಬೇಕಾದ ಖಾಯಂ ತಹಶೀಲ್ದಾರರು ಸಿಬ್ಬಂದಿಗಳು ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಬಾರಿ ಜಿಲ್ಲಾಧಿಕಾರಿಗೆ ಹಾಗೂ ಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ ಸಿಬ್ಬಂದಿಯ ನೇಮಕಾತಿಯಲ್ಲಿ ಆಸಕ್ತಿ ವಹಿಸದೆ ಇರುವುದು ಬೇಸರ ಮೂಡಿಸಿದೆ. ಕೂಡಲೇ ಅಗತ್ಯ ಸಿಬ್ಬಂದಿ ನೇಮಿಸಿ ಸಾರ್ವಜನಿಕರ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಪೊನ್ನಂಪೇಟೆ ನಾಗರಿಕ ವೇದಿಕೆ ಸಮಿತಿ ನಿರ್ದೇಶಕ ಎರ್ಮು ಹಾಜಿ ಮನವಿ ಮಾಡಿದ್ದಾರೆ.

ಸಚಿವರು ಭರವಸೆ ನೀಡಿದ್ದಾರೆ

ನೂತನ ತಾಲೂಕಿಗೆ ಬೇಕಾದ ಖಾಯಂ ತಹಶೀಲ್ದಾರ್ ಹಾಗೂ ಸಿಬ್ಬಂದಿಗಳ ನೇಮಕಾತಿಗೆ ಈಗಾಗಲೇ ಕ್ಷೇತ್ರದ ಶಾಸಕರು ಕಂದಾಯ ಸಚಿವರ ಗಮನ ಸೆಳೆದಿದ್ದಾರೆ. ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲದೆ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಸದ್ಯದಲ್ಲಿಯೇ ಸಿಬ್ಬಂದಿ ನೇಮಕಾತಿ ಮಾಡುವ ಬಗ್ಗೆ ಕಂದಾಯ ಸಚಿವರು ಭರವಸೆ ನೀಡಿದ್ದಾರೆ. ಸದ್ಯದಲ್ಲಿಯೇ ಸರ್ಕಾರದಿಂದ ಆದೇಶ ಬರುವ ಸಾಧ್ಯತೆ ಇದೆ ಎಂದು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಮಾಹಿತಿ ನೀಡಿದ್ದಾರೆ.

ವರದಿ : ಹೆಚ್.ಕೆ. ಜಗದೀಶ್