ಮಡಿಕೇರಿ, ಸೆ. ೧೯: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಹಾಡಿಗಳಲ್ಲಿ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆಗಳು ಒಟ್ಟಾಗಿ ಸೇರಿ ಹಾಡಿಯ ಜನರಿಗೆ ನಿವೇಶನಕ್ಕೆ ಯೋಗ್ಯವಾಗುವ ಸ್ಥಳ ಗುರುತಿಸಿ ಸರ್ವೆ ಮಾಡಿ ಮೂಲಭೂತ ಸೌಕರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸ್ಪಷ್ಟಪಡಿಸಿದರು.

ಅರಣ್ಯ ಹಕ್ಕು ಕಾಯ್ದೆಗೆ ಸಂಬAಧಿಸಿದAತೆ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದ ವ್ಯಾಪ್ತಿಗೆ ಬರುವ ಹಾಡಿಗಳಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತಗೊಂಡಿರುವ ಅರ್ಜಿಗಳ ಮರು ಪರಿಶೀಲನೆ ಮಾಡಬೇಕು ಎಂದರು.

ನಾಗರಹೊಳೆ ವ್ಯಾಪ್ತಿಯಲ್ಲಿ ಹಕ್ಕುಪತ್ರ ವಿತರಿಸುವ ಕುರಿತು ಸರ್ವೆ ನಡೆಸಲಾಗಿದ್ದು, ತಕರಾರು ಇರುವ ಜಾಗಗಳಿಗೆ ಅರಣ್ಯ, ಕಂದಾಯ, ಮತ್ತು ಗ್ರಾಮ ಪಂಚಾಯಿತಿ ಪಿಡಿಒಗಳು ಮರು ಸರ್ವೆ ನಡೆಸಿ ಅರ್ಹರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದರು.

ರಾಜ್ಯ ಸರ್ಕಾರದಿಂದ ಹಾಡಿಯ ಜನರಿಗೆ ವಸತಿ ನಿರ್ಮಾಣಕ್ಕೆ ೬೨೦ ಮನೆಗಳು ಮಂಜೂರಾಗಿದ್ದು, ಈ ಸಂಬAಧ ಫಲಾನುಭವಿಗಳ ಮನೆ ನಿರ್ಮಾಣಕ್ಕೆ ಸೂಕ್ತ ಜಾಗಗಳ ಸರ್ವೆ ನಡೆಯಬೇಕು ಮತ್ತು ಈಗಾಗಲೇ ಸರ್ವೆ ಮಾಡಲಾಗಿರುವ ಜಾಗಗಳಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಸುಮಾರು ೫ ಲಕ್ಷ ರೂ ವರೆಗೂ ಹಣ ಮಂಜೂರು ಮಾಡುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯ ಹಕ್ಕು ಪತ್ರ ನೀಡಲು ನಿರ್ದಿಷ್ಟ ಹಾಡಿಯ ಜನರು ಗುರುತಿಸುವುದು ಹಾಗೂ ಪೂರಕ ದಾಖಲೆಗಳನ್ನು ಒದಗಿಸುವ ಕಾರ್ಯ ನಡೆಯಬೇಕಿದೆ. ಮೂಲಭೂತ ಸೌಕರ್ಯ ಪಡೆಯಲು ಅರ್ಜಿ ನೀಡಿದ ಹಾಡಿಗಳಿಗೆ ಸರ್ವೆ ನಡೆಸಿ ರಸ್ತೆ, ನೀರು, ಸಮುದಾಯ ಭವನ, ಅಂಗನವಾಡಿ ಕೇಂದ್ರ, ಚರಂಡಿ, ವಿದ್ಯುತ್ ಸಂಪರ್ಕಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಆದೇಶಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಪಿಡಿಒ ಗಳು ಒಟ್ಟಾಗಿ ಸೇರಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಬರುವ ವಿಷಯಗಳು ಮತ್ತು ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯಕ ವಾಗುವಂತೆ ಮುಂದಿನ ವಾರದಲ್ಲಿ ಒಂದು ದಿನದ ಕಾರ್ಯಾಗಾರ ಮಾಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡೂ, ಐಟಿಡಿಪಿ ಇಲಾಖೆ ಅಧಿಕಾರಿ ಶ್ರೀನಿವಾಸ್, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಐಟಿಡಿಪಿ ಅಧಿಕಾರಿ ಗುರುಶಾಂತಪ್ಪ, ಪ್ರಕಾಶ್, ಗೋಪಾಲ್, ಪಿಆರ್‌ಇಡಿ ಇಇ, ಪಿಡಿಒಗಳು ಇತರರು ಇದ್ದರು.