ಮಡಿಕೇರಿ, ಸೆ. ೧೮: ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಸೇರಿದಂತೆ ಒಟ್ಟು ೫ ಮಂದಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದ ಘಟನೆ ನಡೆದಿದೆ.

ಪಂಚಾಯತ್‌ರಾಜ್ ಇಂಜಿನಿಯರಿAಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ, ಅದೇ ಕಚೇರಿಯ ತಾಂತ್ರಿಕ ಸಹಾಯಕ ತೌಸಿಫ್, ಕಂಪ್ಯೂಟರ್ ಆಪರೇಟರ್ ಕವನ್, ದ್ವಿತೀಯ ದರ್ಜೆ ಸಹಾಯಕ ರಮೇಶ್, ಏಜೆಂಟ್ ಸಂತೋಷ್ ಇವರುಗಳೇ ಬಂಧಿತರು.

ಕೊಳಗದಾಳು ಗ್ರಾಮದ ಗುತ್ತಿಗೆದಾರ ಬಿ. ನಂದ ಎಂಬವರು ಬೇಂಗೂರು ಗ್ರಾಮ ಪಂಚಾಯಿತಿಯ ಕೊಳಗದಾಳು, ಕೊಟ್ಟೂರು, ಬಾಡಗ ಹಾಗೂ ಬೇಂಗೂರು ಗ್ರಾಮಗಳಲ್ಲಿ ಮಳೆಯಿಂದ ಹಾಳಾಗಿರುವ ೪ ರಸ್ತೆಗಳ ೧೬ ಲಕ್ಷ ರೂ. ಕಾಮಗಾರಿ ಹಾಗೂ ೭.೫೦ ಲಕ್ಷ ವೆಚ್ಚದ ೫ ಮೋರಿಗಳ (ಕಲ್ವರ್ಟ್ ಕಾಮಗಾರಿ) ಸೇರಿ ಒಟ್ಟು ೨೩.೫೦ ಲಕ್ಷದ ಕಾಮಗಾರಿಗಳನ್ನು ನಿರ್ವಹಿಸಲು ಸೂಕ್ತ ದಾಖಲಾತಿಗಳೊಂದಿಗೆ ತಾ. ೧೬ರಂದು ಅರ್ಜಿ ಸಲ್ಲಿಸಿದ್ದರು. ಈ ಕಾಮಗಾರಿಗಳನ್ನು ಮಂಜೂರಾತಿ ಮಾಡುವ ಒಪ್ಪಂದ ಪತ್ರವನ್ನು ಪಡೆಯುವುದರ ಜೊತೆಗೆ ತಾವು ಪಡೆದಿದ್ದ ಮೂರ್ನಾಡು ಹಾಗೂ ಮಡಿಕೇರಿ ನಗರದ ಕಸ ವಿಲೇವಾರಿ ಘಟಕದ ೨೮.೫ ಲಕ್ಷ ಕಾಮಗಾರಿಗಳ ಬಗ್ಗೆ ವಿಚಾರಿಸಲು ಪಂಚಾಯತ್ ರಾಜ್ ಇಲಾಖೆಯ ಕಚೇರಿಗೆ ತೆರಳಿದ್ದ ವೇಳೆ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ, ಕಚೇರಿಯ ತಾಂತ್ರಿಕ ಸಹಾಯಕ ತೌಸಿಫ್, ಕಂಪ್ಯೂಟರ್ ಆಪರೇಟರ್ ಕವನ್ ಇವರುಗಳು ೧,೯೨,೦೦೦ ಹಾಗೂ ೭೫,೦೦೦ ಸೇರಿದಂತೆ ಒಟ್ಟು ೨,೬೭,೦೦೦ ರೂ. ಲಂಚದ ಬೇಡಿಕೆಯಿಟ್ಟಿದ್ದರು. ತೌಸಿಫ್ ಮುಂಗಡವಾಗಿ ೧೪,೦೦೦ ಹಣವನ್ನು ಪಡೆದಿದ್ದು, ಉಳಿದ ೨,೫೩,೦೦೦ ಲಂಚದ ಹಣಕ್ಕಾಗಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ನಂದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಅದರನ್ವಯ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯಾಚರಣೆಗಿಳಿದ ಸಂದರ್ಭ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ ತಮ್ಮ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಮೇಶ್ ಮೂಲಕ ೧,೯೨,೦೦೦ ಲಂಚವನ್ನು, ತೌಸಿಫ್ ೭೫,೦೦೦ ಲಂಚವನ್ನು ಸ್ವೀಕರಿಸಿ ಏಜೆಂಟ್ ಸಂತೋಷ್ ಎಂಬಾತನ ಬಳಿ ನೀಡಿರುವುದು ಬೆಳಕಿಗೆ ಬಂದಿದೆ. ಬಳಿಕ ಸಂತೋಷ್‌ನನ್ನು ತನಿಖೆಗೊಳ ಪಡಿಸಿದಾಗ, ಆತನ ಬ್ಯಾಗ್‌ನಲ್ಲಿ ೭೫,೦೦೦ ಹಣದೊಂದಿಗೆ ೧,೪೩,೫೦೦ ಹೆಚ್ಚುವರಿ ಅಕ್ರಮ ಹಣ ದೊರೆತಿದೆ. ಲಂಚದ ಹಣ ಹಾಗೂ ಹೆಚ್ಚುವರಿ ಅಕ್ರಮ ಹಣ ಸೇರಿದಂತೆ ಒಟ್ಟು ೪,೧೦,೫೦೦ ರೂ.ಗಳನ್ನು ವಶಕ್ಕೆ ಪಡೆದು ಶ್ರೀಕಂಠಯ್ಯ, ರಮೇಶ್, ತೌಸಿಫ್, ಸಂತೋಷ್, ಕವನ್ ಇವರುಗಳನ್ನು ಬಂಧಿಸಿದ ಎಸಿಬಿ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ ಅವರು ಈ ಹಿಂದೆ ಬರಪರಿಹಾರದ ಕೋಟ್ಯಂತರ ರೂ. ಹಣವನ್ನು ಖಾಸಗಿ ಬ್ಯಾಂಕ್‌ನಲ್ಲಿರಿಸಿದ್ದ ಆರೋಪದಡಿ ಕರ್ತವ್ಯದಿಂದ ಅಮಾನತ್ತು ಗೊಂಡಿದ್ದರು.

ಮನೆಯಲ್ಲೂ ಕಾರ್ಯಾಚರಣೆ

ಎಸಿಬಿ ಪೊಲೀಸರು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಕಚೇರಿಗೆ ದಾಳಿ ನಡೆಸಿದ್ದಲ್ಲದೆ, ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ ಅವರ ಮನೆಗೂ ತೆರಳಿ ತನಿಖೆ ನಡೆಸಿದರು. ಸುಮಾರು ೫ ತಾಸಿಗೂ ಅಧಿಕ ಕಾಲ ಕಾರ್ಯಾಚರಣೆ ನಡೆಯಿತು. ಈ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಅರುಣಾಂಶು ಗಿರಿ ಅವರು ಭೇಟಿ ನೀಡಿದ್ದರು. ಎಸಿಬಿ ದಾಳಿ ಸಂದರ್ಭ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಕಚೇರಿ ಸಮೀಪದ ಕಾಡಿನಲ್ಲಿ ಹಣವನ್ನು ಎಸೆಯಲಾಗಿದೆ ಎಂಬ ಗಾಳಿ ಸುದ್ದಿ ಹರಡಿದ್ದರಿಂದ ಎಸಿಬಿ ಅಧಿಕಾರಿಗಳು ಕಾಡಿನಲ್ಲೂ ಹುಡುಕಾಟ ನಡೆಸಿದರಾದರೂ, ಕೊನೆಗೆ ಕಚೇರಿ ಬಳಿಯಿದ್ದ ಕಾರೊಂದರಲ್ಲಿ ಹಣ ಪತ್ತೆಯಾಯಿತು.

ಕರ್ತವ್ಯದಿಂದ ವಜಾಗೊಳಿಸಬೇಕು

ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ ಶ್ರೀಕಂಠಯ್ಯ ಭ್ರಷ್ಟರಾಗಿದ್ದು, ಇವರನ್ನು ಕರ್ತವ್ಯದಿಂದಲೇ ವಜಾಗೊಳಿಸಬೇಕು ಎಂದು ಜಿ.ಪಂ. ಮಾಜಿ ಸದಸ್ಯ ಬಾನಂಡ ಪ್ರಥ್ಯು ಆಗ್ರಹಿಸಿದ್ದಾರೆ. ಈ ಹಿಂದೆ ಇವರು ಬರಪರಿಹಾರದ ಕೋಟ್ಯಂತರ ರೂ.ಹಣವನ್ನು ಖಾಸಗಿ ಬ್ಯಾಂಕ್‌ನಲ್ಲಿರಿಸಿದ ಆರೋಪದಂತೆ ಅಮಾನತುಗೊಂಡಿದ್ದರು. ಆದರೆ, ಯಾರದೋ ಪ್ರಭಾವದಿಂದ ಮತ್ತೆ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಇವರ ಭ್ರಷ್ಟಾಚಾರ ಮತ್ತೆ ಬಯಲಾಗಿದ್ದು, ಕರ್ತವ್ಯದಿಂದ ವಜಾಗೊಳಿಸಬೇಕು. ಜಿ.ಪಂ. ಮೂಲಕವೂ ಈ ಹಿಂದೆ ಹೋರಾಟ ನಡೆಸಲಾಗಿತ್ತು ಎಂದು ಪ್ರಥ್ಯು ಹೇಳಿದ್ದಾರೆ.