ಮಡಿಕೇರಿ, ಸೆ. ೧೮: ಜಿಲ್ಲೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಮತ್ತು ಕಳೆದ ಅನೇಕ ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆಯ ಕೊಡಗು ಜಿಲ್ಲಾ ಸಮಿತಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದೆ.

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ಬಿದನೂರು ಗ್ರಾಮದ ಸರ್ವೇ ನಂ.೭೮ರಲ್ಲಿ ೨೦ ಸೆಂಟ್ ಜಾಗ ಡಾ.ಅಂಬೇಡ್ಕರ್ ಸಮುದಾಯ ಭವನಕ್ಕಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅವರ ಹೆಸರಿಗೆ ಕಾಯ್ದಿರಿಸಿದ್ದು, ತಕ್ಷಣ ಗುರುತಿಸಿ ಕೊಡಬೇಕು, ದುಂಡಳ್ಳಿ ಗ್ರಾ.ಪಂ ವ್ಯಾಪ್ತಿಯ ಮಾದ್ರೆ ದುಂಡಳ್ಳಿ ಗ್ರಾಮದ ಸರ್ವೆ ನಂ. ೨೧/೨ರಲ್ಲಿ ೧೫೯ ಏಕರೆ ಪೈಸಾರಿ ಜಾಗವಿದ್ದು, ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ತಲಾ ೨ ಏಕರೆಯಂತೆ ಮಂಜೂರು ಮಾಡಬೇಕು, ಪ್ರತಿ ಗ್ರಾಮದಲ್ಲಿರುವ ಸರ್ಕಾರಿ ಪೈಸಾರಿ ಜಾಗದಲ್ಲಿ ಅಕ್ರಮ-ಸಕ್ರಮದಲ್ಲಿ ಗ್ರಾಮದ ದಲಿತರಿಗೆ ಶೇ.೫೦ ರಷ್ಟು ಕಾಯ್ದಿರಿಸಬೇಕು, ಇತರ ಒತ್ತುವರಿಯನ್ನು ತೆರವುಗೊಳಿಸಬೇಕು, ಪ್ರತಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ನೀಡಬೇಕು ಮತ್ತು ಅನುದಾನ ಬಿಡುಗಡೆ ಮಾಡಬೇಕು, ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಗ್ರಾ.ಪಂ ಗಳಲ್ಲಿ ಗ್ರಾಮಸಭೆಗಳು ಮತ್ತು ವಾರ್ಡ್ ಸಭೆಗಳು ನಡೆದಿಲ್ಲ. ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿರುವುದರಿಂದ ತಕ್ಷಣ ಸಭೆ ಕರೆಯಬೇಕು, ಪೊಲೀಸ್ ಠಾಣೆಗಳಲ್ಲಿ ಎಸ್‌ಸಿ, ಎಸ್‌ಟಿ ಸಭೆಗಳನ್ನು ನಡೆಸಬೇಕು, ಪರಿಶಿಷ್ಟರ ಭೂಮಿ ಪರಾಭಾರೆ ನಿಷೇಧ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಬೇಕು, ಜಿಲ್ಲೆಯಲ್ಲಿರುವ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಅಥವಾ ವಸತಿ ಕಲ್ಪಿಸಬೇಕು, ಮಹಾರಾಷ್ಟçದ ಡಾ.ಅಂಬೇಡ್ಕರ್ ಚೈತನ್ಯ ಭೂಮಿಗೆ ತೆರಳಲು ಪ್ರತಿ ವರ್ಷದಂತೆ ಈ ಬಾರಿಯೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಜಂಟಿ ವೇದಿಕೆಯ ಪ್ರಮುಖರು ಆಗ್ರಹಿಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಆರ್. ಪಾಲಾಕ್ಷ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ವೀರೇಂದ್ರ, ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಜೆ.ಸಿ. ಜನಾರ್ಧನ, ಕಾರ್ಯದರ್ಶಿ ವಿರೂಪಾಕ್ಷ ಸಂದೀಪ, ಶನಿವಾರಸಂತೆ ಅಧ್ಯಕ್ಷ ಎಸ್.ಎಸ್. ಶಿವಲಿಂಗ, ಪ್ರತಿಮೆ ನಿರ್ಮಾಣ ಸಮಿತಿ ಉಪಾಧ್ಯಕ್ಷ ನಂಜುAಡ ಸ್ವಾಮಿ, ಕಾರ್ಯದರ್ಶಿ ಹೆಚ್. ನಟರಾಜ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.