ಕಣಿವೆ, ಸೆ. ೧೯ : ನೆಲಕಚ್ಚಿದ ಶುಂಠಿ, ಮರಗೆಣಸು, ಕುಂಬಳಕಾಯಿ ಸೇರಿದಂತೆ ಇನ್ನಿತರ ಫಸಲಿಗೆ ಹೋಲಿಸಿದಲ್ಲಿ ಸಿಹಿಗೆಣಸು ಫಸಲು ಕೃಷಿಕರಿಗೆ ಈ ಬಾರಿ ವರವಾಗಿದೆ.
ಇದೀಗ ಕೆಜಿಯೊಂದಕ್ಕೆ ೭ ರಿಂದ ೮ ರೂ.ಗಳಿರುವ ಈ ಫಸಲಿಗೆ ಒಂದು ಕ್ವಿಂಟಾಲ್ಗೆ ೮೦೦ ರೂ ಇದೆ.
ಒಂದು ಎಕರೆ ಭೂಮಿಯಲ್ಲಿ ಗರಿಷ್ಠ ೧೫೦ ಕ್ವಿಂಟಾಲ್ಗಳಷ್ಟು ಇಳುವರಿ ತೆಗೆಯಬಹುದು. ಒಂದು ಎಕರೆ ಭೂಮಿಯಲ್ಲಿ ಸಿಹಿಗೆಣಸು ಬೆಳೆಯಲು ಸ್ವಂತ ಭೂಮಿ ಹೊಂದಿದ್ದರೆ ೧೦ ರಿಂದ ೧೫ ಸಾವಿರ ರೂ ಖರ್ಚು ತಗಲುತ್ತದೆ.
ಫಲವತ್ತಾದ ಮಣ್ಣಿನಲ್ಲಿ ಬೆಳೆದರೆ ಉತ್ತಮವಾಗಿ ಇಳುವರಿ ಬರುವ ಈ ಫಸಲಿನಲ್ಲಿ ೮೦ ರಿಂದ ೯೦ ಸಾವಿರ ರೂ.ಗಳವರೆಗೂ ಗಳಿಸಬಹುದು. ಖರ್ಚು ಕಳೆದು ಎಕರೆಗೆ ಕನಿಷ್ಟ ಎಂದರೂ ೫೦ ಸಾವಿರ ಉಳಿಸಬಹುದು ಎನ್ನುತ್ತಾರೆ ಚಿಕ್ಕಹೊಸೂರಿನ ಕೃಷಿಕ ಬಸವರಾಜು.
ಶುಂಠಿ ಫಸಲಿಗೆ ಈ ಬಾರಿ ಬೆಲೆ ಗಣನೀಯವಾಗಿ ಕುಸಿತ ಕಂಡಿದ್ದರಿAದ ಬಹಳಷ್ಟು ಮಂದಿ ಶುಂಠಿ ಕಟಾವು ಮಾಡಿ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಈ ಸಿಹಿ ಗೆಣಸು ಬೆಳೆಗೆ ಹೆಚ್ಚು ಕೃಷಿಕರು ಮುಂದಾಗುತ್ತಾರೆ.
ಈಗಾಗಲೇ ಕುಶಾಲನಗರ ತಾಲೂಕಿನ ಭುವನಗಿರಿ, ತೊರೆನೂರು, ಹಾರಂಗಿ, ಯಡವನಾಡು, ಅತ್ತೂರು, ಗುಡ್ಡೆಹೊಸೂರು ಸೇರಿದಂತೆ ಕಾವೇರಿ ನದಿ ದಂಡೆಯ ಗ್ರಾಮಗಳ ಉದ್ದಕ್ಕೂ ನೂರಾರು ರೈತರು ಶುಂಠಿಯನ್ನು ತೆರವು ಮಾಡಿ ಈ ಸಿಹಿಗೆಣಸಿನ ಬಳ್ಳಿಯನ್ನು ಬಿತ್ತನೆ ಮಾಡಿರುವುದು ಕಂಡುಬರುತ್ತಿದೆ.
ಕೆಲವೊಂದು ಬಾರಿ ಬೇಡಿಕೆಗನುಗುಣವಾಗಿ ಈ ಫಸಲು ಮಾರುಕಟ್ಟೆಯಲ್ಲಿ ಅಲಭ್ಯವಾದಲ್ಲಿ ಇದರ ಬೆಲೆ ಕ್ವಿಂಟಾಲ್ ಒಂದಕ್ಕೆ ೧೨೦೦ ರಿಂದ ೧೫೦೦ ರೂಗಳವರೆಗೂ ಜಿಗಿದದ್ದೂ ಇದೆ. ಆದರೆ ಈ ಬಾರಿ ಒಂದಷ್ಟು ತೃಪ್ತಿದಾಯಕ ಬೆಲೆ ಮಾರುಕಟ್ಟೆಯಲ್ಲಿ ಇರುವುದರಿಂದ ಬಹಳಷ್ಟು ರೈತರು ಸಿಹಿಗೆಣಸಿನತ್ತ ಮುಖ ಮಾಡಿರುವುದು ಮುಂದಿನ ನಾಲ್ಕು ತಿಂಗಳ ಬಳಿಕ ಮಾರುಕಟ್ಟೆಯಲ್ಲಿ ಬೆಲೆ ಯಾವ ರೀತಿ ಇರುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ. ಏಕೆಂದರೆ ಯಾರಾದರೂ ಒಬ್ಬ ರೈತ ಏನನ್ನಾದರೂ ಬೆಳೆದು ಒಂದಷ್ಟು ಕಾಸು ಮಾಡಿಕೊಂಡರೆ ಉಳಿದ ರೈತರು ಅದನ್ನೇ ಬೆಳೆಯಲು ಮುಂದಾಗುವ ಕಾರಣದಿಂದಾಗಿ ಬೇಡಿಕೆ ದಿಢೀರನೇ ಕುಸಿದು ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಪ್ರಗತಿಪರ ಕೃಷಿಕ ಸಿದ್ದಲಿಂಗಪುರದ ಎಂ.ಟಿ.ಬೇಬಿ.
ಈ ಗೆಣಸನ್ನು ದೆಹಲಿಯ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತದೆ. ಕೇರಳದಲ್ಲೂ ಈ ಗೆಣಸಿಗೆ ಬೇಡಿಕೆ ಇತ್ತಾದರೂ ಇದೀಗ ಕಳೆದ ಮೂರ್ನಾಲ್ಕು ತಿಂಗಳಿAದ ಕೋವಿಡ್ ಮಹಾಮಾರಿ ವ್ಯಾಪಕವಾಗಿ ಕೇರಳ ರಾಜ್ಯದಲ್ಲಿ ಹರಡಿರುವುದರಿಂದ ಆ ರಾಜ್ಯದ ಹೋಟೆಲ್ ಉದ್ಯಮ ನೆಲಕಚ್ಚಿರುವುದು ತೋಟಗಾರಿಕೆ ಬೆಳೆಗಾರರಿಗೆ ಬಾರೀ ಆಘಾತವನ್ನು ಉಂಟುಮಾಡಿದೆ.
ಏಕೆAದರೆ ಕೊಡಗು ಸೇರಿದಂತೆ ರಾಜ್ಯದ ಇತರೇ ಜಿಲ್ಲೆಗಳಲ್ಲಿ ಬೆಳೆಯುವ ಮರಗೆಣಸು, ಕೆಸ, ಕುಂಬಳಕಾಯಿ ಮೊದಲಾದ ಕಾಯಿಪಲ್ಯೆಗಳನ್ನು ಕೇರಳದ ವ್ಯಾಪಾರಿಗಳೇ ರೈತನ ಹೊಲ ಗದ್ದೆಗಳಿಗೆ ಬಂದು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಕೊಂಡೊಯ್ಯುತ್ತಿದ್ದರು. ಆದರೆ ಆ ರಾಜ್ಯದಲ್ಲಿ ಉಲ್ಭಣಿಸಿರುವ ಕೋವಿಡ್ ೧೯ ಹತೋಟಿಗೆ ಬರುವ ತನಕ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಅಲ್ಲಿಂದ ಕೊಡಗಿಗೆ ಯಾವ ವ್ಯಾಪಾರಿಗಳು ಬರುತ್ತಿಲ್ಲ. ಇತ್ತ ಬೆಳೆಗಾರರು ಕೂಡ ಅಲ್ಲಿಗೆ ಕೊಂಡೊಯ್ದು ಮಾರಾಟ ಮಾಡಲು ಆಗುವುದೂ ಇಲ್ಲ. ಹಾಗಾಗಿ ಬೇರೆ ತರಕಾರಿ ಕಾಯಿ ಪಲ್ಯೆಗಳಿಗೆ ಇಲ್ಲದ ಬೆಲೆ ಸಿಹಿ ಗೆಣಸಿಗೆ ಇದೀಗ ದೊರಕುತ್ತಿರುವುದು ಮಾತ್ರ ಸಿಹಿ ತಿನಿಸಿದಂತಿದೆ.
-ಕೆ.ಎಸ್.ಮೂರ್ತಿ