ಗೋಣಿಕೊಪ್ಪ ವರದಿ, ಸೆ. ೧೮: ಒಂದು ತಿಂಗಳ ಒಳಗೆ ಪೊನ್ನಂಪೇಟೆ ತಾಲೂಕು ಕಚೇರಿಗೆ ತಹಶೀಲ್ದಾರ್ ಸೇರಿದಂತೆ ಖಾಲಿ ಇರುವ ಹುದ್ದೆ ಭರ್ತಿಯಾಗದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಎಚ್ಚರಿಕೆ ನೀಡಿದ್ದಾರೆ.

ನೂತನ ತಾಲೂಕು ರಚನೆ ಹೆಸರಿಗಷ್ಟೆ ಎಂಬAತಾಗಿದೆ. ಒಬ್ಬ ಶಿರಸ್ತೇದಾರ್ ಹೊರತುಪಡಿಸಿ ಎಲ್ಲ ಹುದ್ದೆ ಖಾಲಿ ಇದ್ದು, ಈ ಬಗ್ಗೆ ಸ್ಥಳೀಯ ಶಾಸಕರು ಸರ್ಕಾರದ ಗಮನ ಸೆಳೆದು ಹುದ್ದೆ ಭರ್ತಿಗೆ ಮುಂದಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

೫ ಜನ ಗುಮಾಸ್ತ ಹುದ್ದೆ ಮಂಜೂರಾಗಿದೆ. ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೂ ಬಡ್ತಿ ನೀಡಿರುವುದರಿಂದ ಸಾರ್ವಜನಿಕರಿಗೆ ಸೇವೆ ಸಿಗುತ್ತಿಲ್ಲ. ವೀರಾಜಪೇಟೆ ತಹಶೀಲ್ದಾರ್ ಇಲ್ಲಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಜನರಿಗೆ ಸಿಗುವುದಿಲ್ಲ. ಡಿ. ಗ್ರೂಪ್ ನೌಕರರು, ಬೆರಳಚ್ಚು ನೌಕರರ ನೇಮಕವಾಗಿಲ್ಲ. ಕಚೇರಿ ಖಾಲಿಯಾಗಿದೆ. ಕನಿಷ್ಟ ೨ ಪ್ರಥಮ ದರ್ಜೆ, ೩ ದ್ವಿತೀಯ ದರ್ಜೆ ಸಿಬ್ಬಂದಿ ನೇಮಕ ಮಾಡಬೇಕು. ವೀರಾಜಪೇಟೆಯಲ್ಲಿ ಇಬ್ಬರು ತಹಶೀಲ್ದಾರ್ ಇದ್ದು, ಇಲ್ಲಿನ ಒಬ್ಬರನ್ನು ಪೊನ್ನಂಪೇಟೆಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಕಚೇರಿಗೆ ಪೀಠೋಪಕರಣ, ಆಲ್ಮೆರ, ಕಂಪ್ಯೂಟರ್ ಸಾರ್ವಜನಿಕ ವಂತಿಗೆಯಿAದ ನಾಗರಿಕ ವೇದಿಕೆ ನೀಡಿದೆ. ಸರ್ಕಾರ ಇಲ್ಲಿಗೆ ಯಾವುದೇ ಮೂಲಭೂತ ಸೌಕರ್ಯ ನೀಡಲು ಮುಂದಾಗುತ್ತಿಲ್ಲ. ಇದರಿಂದ ತಾಲೂಕು ಅವಲಂಭಿಸಿರುವ ೨೧ ಗ್ರಾಮ ಪಂಚಾಯಿತಿ ವ್ಯಾಪ್ತಿ ಜನರಿಗೆ ತೊಂದರೆಯಾಗಿದೆ ಎಂದರು.

ತಾಲೂಕಿನ ಭೂಪತ್ರ ದಾಖಲೆ ಭೂಮಾಪನ ಕೇಂದ್ರಕ್ಕೆ ನೋಂದಣಿಯಾಗಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ತಾಲೂಕು ವ್ಯಾಪ್ತಿಗೆ ಸಂಬAಧಿಸಿದ ಭೂದಾಖಲೆ, ಕಡತವನ್ನು ಪೊನ್ನಂಪೇಟೆಗೆ ರವಾನಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇದಕ್ಕೆ ಸರ್ಕಾರ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ಬಿ. ಶೆಟ್ಟಿಗೇರಿ ಗ್ರಾ.ಪಂ. ಸದಸ್ಯ ಕೊಲ್ಲೀರ ಬೋಪಣ್ಣ, ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ಅಧ್ಯಕ್ಷ ತೀತಮಾಡ ಯಶ್ವಿನ್ ಗೋಷ್ಠಿಯಲ್ಲಿದ್ದರು.