ಕಣಿವೆ, ಸೆ. ೧೭: ಹಾರಂಗಿ ಪುನರ್ವಸತಿ ಪ್ರದೇಶದ ಅತ್ತೂರು ಗ್ರಾಮದಲ್ಲಿ ಶುಕ್ರವಾರ ನಿಧನರಾದ ವ್ಯಕ್ತಿಯೊಬ್ಬರ ಶವವನ್ನು ಹೂಳಲು ಸೂಕ್ತ ಸ್ಮಶಾನವಿಲ್ಲದ ಪರಿಣಾಮ ಮೃತ ವ್ಯಕ್ತಿ ವಾಸವಿದ್ದ ಮನೆಯಂಗಳದಲ್ಲೇ ಗುಂಡಿ ತೆಗೆದು ಶವಸಂಸ್ಕಾರಗೈದ ಘಟನೆ ಶುಕ್ರವಾರ ನಡೆದಿದೆ. ಇದು ಆಡಳಿತ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.

ಒAದು ಜಲಾಶಯ ನಿರ್ಮಾಣಕ್ಕೆ ಆಸ್ತಿ ಪಾಸ್ತಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಿದ ಸರ್ಕಾರ ಸೂಕ್ತ ಸ್ಮಶಾನವನ್ನು ಗುರುತಿಸದಿರುವ ಬಗ್ಗೆ ಗ್ರಾಮಸ್ಥರು ಹಾಗೂ ಶವ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಮೃತ ವ್ಯಕ್ತಿಯ ಸಂಬAಧಿಕರು ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕಿದ ಪ್ರಸಂಗವೂ ನಡೆಯಿತು. ಅತ್ತೂರು ಗ್ರಾಮದ ನಿವಾಸಿ ವಯೋ ಸಹಜ ಅನಾರೋಗ್ಯದಿಂದ ಸಾವಿಗೀಡಾದ ೭೦ ರ ಪ್ರಾಯದ ಕರ್ತಜೆ ಗಂಗಾಧರ್ ಎಂಬವರು ಮೃತಪಟ್ಟ ಸಂದರ್ಭ ಅಂತ್ಯಕ್ರಿಯೆ ನೆರವೇರಿಸಲು ಗ್ರಾಮದಲ್ಲಿ ಸೂಕ್ತ ಸ್ಮಶಾನದ ವ್ಯವಸ್ಥೆ ಇಲ್ಲದ್ದರಿಂದ ಗ್ರಾಮಸ್ಥರು ಮೃತ ವ್ಯಕ್ತಿ ಗಂಗಾಧರ್ ವಾಸವಿದ್ದ ಮನೆಯಂಗಳದಲ್ಲಿಯೇ ಅಂದರೆ ಮನೆಯ ಶೌಚಾಲಯದ ಗುಂಡಿ ಪಕ್ಕದಲ್ಲಿಯೇ ಮತ್ತೊಂದು ಗುಂಡಿ ತೆಗೆದು ಶವ ಸಂಸ್ಕಾರ ನೆರವೇರಿಸಿದ್ದಾರೆ.

ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಗ್ರಾಮದ ಪಂಚಾಯಿತಿ ಮಾಜಿ ಸದಸ್ಯ ಜಿ.ಟಿ.ರವಿ, ಪುನರ್ವಸತಿ ಕೇಂದ್ರ ಅತ್ತೂರಿನಲ್ಲಿ ಎರಡು ಗ್ರಾಮ ಠಾಣಾಗಳಿದ್ದು ಒಂದರಲ್ಲಿ ೨೭ ಹಾಗೂ ಮತ್ತೊಂದರಲ್ಲಿ ೨೬ ಎಕರೆ ಭೂಮಿಯನ್ನು ಮೀಸಲಿಡಲಾಗಿತ್ತು. ಇದರಲ್ಲಿ ಎರಡು ಗ್ರಾಮ ಠಾಣೆಗಳಲ್ಲಿಯೂ ಜನವಸತಿಯ ಸ್ಮಶಾನ, ತಿಪ್ಪೆ ಹಾಗೂ ಮತ್ತಿತರೆ ಮೂಲ ಸೌಕರ್ಯಕ್ಕೆಂದು ಪ್ರತ್ಯೇಕ ಜಾಗವನ್ನು ಮೀಸಲಿಡಲಾಗಿತ್ತು. ಆದರೆ ಕೆಲವರು ಮೀಸಲಿಟ್ಟ ಜಾಗವನ್ನು ಅತಿಕ್ರಮಿಸಿರುವ ಬಗ್ಗೆ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಮಾಡಿ ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಈ ಸಮಸ್ಯೆಗೆ ಇದೂವರೆಗೂ ಪರಿಹಾರವೇ ದೊರಕಿಲ್ಲ. ಈಗಾಗಲೇ ಅತ್ತೂರು ಗ್ರಾಮದಲ್ಲಿ ೧೬೦ ಕುಟುಂಬಗಳು ವಾಸವಿದೆ. ಪುನರ್ವಸತಿ ಕಲ್ಪಿಸಲು ಕುಟುಂಬಗಳಿಗೆ ನಾಲ್ಕು ಎಕರೆ ಕೃಷಿ ಭೂಮಿ ಮತ್ತು ಪ್ರತ್ಯೇಕ ನಿವೇಶನ ನೀಡಲಾಗಿದೆ. ಆದರೆ ಹಲವರು ಕೃಷಿ ಭೂಮಿಯಲ್ಲೇ ಮನೆಗಳನ್ನು ಕಟ್ಟಿ ವಾಸವಿದ್ದಾರೆ. ಅಂತಹವರು ಶವಸಂಸ್ಕಾರಗಳನ್ನು ತಮ್ಮ ಭೂಮಿಯಲ್ಲೇ ಮಾಡಿಕೊಳ್ಳುವುದರಿಂದ ಅವರಿಗೆ ಸ್ಮಶಾನದ ಅನಿವಾರ್ಯತೆ ಕಂಡು ಬರುವುದಿಲ್ಲ. ಆದರೆ ಸೂಕ್ತ ಭೂಮಿಯಿಲ್ಲದ ಕೇವಲ ನಿವೇಶನಗಳಲ್ಲಿ ವಾಸವಿರುವ ಮಂದಿಗೆ ಮಾತ್ರ ಶವ ಸಂಸ್ಕಾರಕ್ಕೆ ಸಮಸ್ಯೆಯಾಗುತ್ತಿದೆ.

ಇದೇ ಪುನರ್ವಸತಿ ಕೇಂದ್ರದ ವಾರ್ಡ್ನಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಚುನಾಯಿತರಾಗಿರುವ ಹಾಲಿ ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಚಿದಾನಂದ, ಲಕ್ಷ್ಮಣ ಹಾಗೂ ರಮೇಶ್ ಅವರು ಕೂಡಲೇ ಗ್ರಾಮ ಲೆಕ್ಕಿಗರು ಅಥವಾ ಕಂದಾಯ ಅಧಿಕಾರಿಗಳ ಬಳಿ ಸಮಸ್ಯೆಗಳನ್ನು ವಿವರಿಸಿ ಸಮರ್ಪಕವಾದ ಸ್ಮಶಾನದ ಜಾಗವನ್ನು ಮೀಸಲಿಡಲು ಪ್ರಯತ್ನಿಸಬೇಕು. ಈಗಾಗಲೇ ಗ್ರಾಮದ ಎರಡೂ ಗ್ರಾಮಠಾಣಾಗಳಿಗೆಂದು ಮೀಸಲಿಟ್ಟ ತಲಾ ಎರಡೂವರೆ ಎಕರೆ ಜಾಗವನ್ನು ಹುಡುಕಿ ಕೂಡಲೇ ಸ್ಮಶಾನ ಮಾಡಿಕೊಡಬೇಕೆಂದು ಗ್ರಾಮಸ್ಥರಾದ ಸುಭೇದಾರ್ ಚಂದ್ರಶೇಖರ್ (ನಿ) ಆಗ್ರಹಿಸಿದ್ದಾರೆ.