ಮುಳ್ಳೂರು, ಸೆ. ೧೭: ಸಮೀಪದ ಬಾಗೇರಿ ಗ್ರಾಮದ ಶ್ರೀರಾಮೇಶ್ವರ ಸಾವಯವ ಕೃಷಿ ಸಂಘ, ಕೃಷಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ ವತಿಯಿಂದ ರೈತರಿಗೆ ಸಾವಯವ ಕೃಷಿ ಅಳವಡಿಕೆ ಹಾಗೂ ಪ್ರಮಾಣೀಕರಣ ಯೋಜನೆ ಕುರಿತು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳ ಲಾಯಿತು. ಸಾವಯವ ಕೃಷಿ ಅಳವಡಿಕೆಯಲ್ಲಿ ಅಡಿಕೆ ಬೇಸಾಯ ಮತ್ತು ಕಾಳುಮೆಣಸು ನಿರ್ವಹಣೆ ಕುರಿತು ಗೋಣಿಕೊಪ್ಪಲು ಕೆವಿಕೆ ಸಂಸ್ಥೆಯ ವಿಜ್ಞಾನಿ ಡಾ. ದೇವಯ್ಯ ಮಾಹಿತಿ ನೀಡಿದರು. ಸಂಸ್ಥೆಯ ಮತ್ತೊಬ್ಬ ವಿಜ್ಞಾನಿ ಡಾ. ಹರೀಶ್ ಸಾವಯವ ಕೃಷಿ ಪ್ರಮಾಣೀಕರಣ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಸಾವಯವ ಕೃಷಿ ಮತ್ತು ಆರೋಗ್ಯ ಹಾಗೂ ಔಷಧಿ ಸಸ್ಯಗಳ ಉಪಯೋಗದ ಕುರಿತು ಸಾವಯವ ಕೃಷಿಕ ಮತ್ತು ಪ್ರಗತಿಪರ ರೈತ ಹೆಚ್.ಎಸ್. ರಾಜಶೇಖರ್ ರೈತರಿಗೆ ಮಾಹಿತಿ ನೀಡಿದರು. ಕೊಡ್ಲಿಪೇಟೆಯ ಕೃಷಿ ಅಧಿಕಾರಿ ಜಾನ್ ತಾಜ್ ರೈತರಿಗೆ ಕೃಷಿ ಇಲಾಖೆ ಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಾ ಗಾರದಲ್ಲಿ ಶ್ರೀರಾಮೇಶ್ವರ ಸಾವಯವ ಕೃಷಿ ಸಂಘದ ಅಧ್ಯಕ್ಷ ಬಿ.ಡಿ. ಕೇಶವ ಮೂರ್ತಿ ಅಧ್ಯಕ್ಷತೆವಹಿಸಿದ್ದು ಹಂಡ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸುವರ್ಣ, ಕೊಡಗು ಮತ್ತು ಹಾಸನ ಸಾವಯವ ಕೃಷಿ ಒಕ್ಕೂಟದ ಉಪಾಧ್ಯಕ್ಷ ಎಂ.ಕೆ. ಮುತ್ತಪ್ಪ, ರೈತ ಪ್ರಮುಖ ಎಸ್.ಎಲ್. ಮೇದಪ್ಪ, ಕೂಡಿಗೆಯ ಕೃಷಿ ಅಧಿಕಾರಿ ಸ್ವರ್ಣ, ಐಸಿಎಸ್ ವ್ಯವಸ್ಥಾಪಕ ಕೆ. ಪುಟ್ಟಸ್ವಾಮಿ, ಸಾವಯವ ಕೃಷಿ ಸಂಘದ ಕಾರ್ಯದರ್ಶಿ ಬಿ.ಎಸ್. ಸತೀಶ್, ಡಿ. ರಾಜು ಮುಂತಾದವರು ಹಾಜರಿದ್ದರು. ತರಬೇತಿ ಕಾರ್ಯಾ ಗಾರದಲ್ಲಿ ರೈತರು ಪಾಲ್ಗೊಂಡಿದ್ದರು.