ಗುಡ್ಡೆಹೊಸೂರು ಪಿಡಿಓ ಸ್ಪಷ್ಟನೆ
ಕಣಿವೆ, ಸೆ. ೧೭: ಕಾವೇರಿ ನದಿಯ ಮಾಲಿನ್ಯಕ್ಕೆ ಗ್ರಾಮ ಪಂಚಾಯಿತಿ ಯಾವುದೇ ಕಾರಣಕ್ಕೂ ಮುಂದಾಗುವುದಿಲ್ಲ ಎಂದು ಹೇಳಿಕೆ ನೀಡಿರುವ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಶ್ಯಾಂ, ತಗ್ಗು ಪ್ರದೇಶಗಳ ಹಾಗೂ ನದಿ ದಂಡೆಯಲ್ಲಿ ವಾಸವಿರುವ ಕೆಲವು ನಿವಾಸಿಗಳು ಎಸಗುತ್ತಿರುವ ಪರಿಸರ ಮಾರಕ ಚಟುವಟಿಕೆಗಳಿಂದಾಗಿ ಪಂಚಾಯಿತಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಶಕ್ತಿ’ಯಲ್ಲಿ ಪ್ರಕಟವಾದ ‘ಕಾವೇರಿ ನದಿಗೆ ಕಲುಷಿತ ನೀರು ಹರಿಸುತ್ತಿರುವ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ’ ಎಂಬ ತಲೆಬರಹದ ವರದಿಗೆ ಪ್ರತಿಕ್ರಿಯೆ ನೀಡಿರುವ ಪಿಡಿಓ ಶ್ಯಾಂ, ಮಾದಾಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಎದುರು ಇರುವ ಜನವಸತಿಯ ಬಳಕೆಯ ತ್ಯಾಜ್ಯ ನೀರು ಹಾಗೂ ಅಲ್ಲಿನ ಕೆಲವು ಕ್ಯಾಂಟೀನ್‌ಗಳಿAದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಚರಂಡಿಗೆ ಹಾಕುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅಲ್ಲಿ ವಾಸವಿರುವ ನಿವಾಸಿಗಳಿಗೆ ಕಡ್ಡಾಯವಾಗಿ ಪ್ರತಿಯೊಬ್ಬರು ಇಂಗು ಗುಂಡಿ ಹೊಂದಲೇಬೇಕು ಎಂದು ತಲಾ ಮನೆಯೊಂದಕ್ಕೆ ಪಂಚಾಯಿತಿ ವತಿಯಿಂದ ೧೪ ಸಾವಿರ ಹಣ ಕೊಡುತ್ತೇವೆ. ಆದರೆ ಯಾರೂ ಕೂಡ ಇಂಗು ಗುಂಡಿ ಮಾಡಲು ಮುಂದೆ ಬರುತ್ತಿಲ್ಲ. ಜೊತೆಗೆ ಪಂಚಾಯಿತಿಯ ಕಸ ಸಂಗ್ರಹದ ವಾಹನ ವಾರದಲ್ಲಿ ಮೂರು ಬಾರಿ ಅಲ್ಲಿಗೆ ತೆರಳಿದರೂ ಕೂಡ ಯಾರೊಬ್ಬರೂ ಕಸವನ್ನು ವಾಹನಕ್ಕೆ ಹಾಕದೇ ಚರಂಡಿ ಅಥವಾ ನದಿ ದಂಡೆಗೆ ಬಿಸಾಕುತ್ತಿರುವ ಬಗ್ಗೆ ಮಾಹಿತಿ ಇದೆ.
ಇದರಿಂದಾಗಿ ನದಿ ದಂಡೆ ಕಲುಷಿತವಾಗಿದೆ. ಪಂಚಾಯಿತಿಯಿAದ ಕೂಡಲೇ ಅಲ್ಲಿನ ಚರಂಡಿ ಸ್ವಚ್ಛಗೊಳಿಸಲಾಗುತ್ತದೆ. ಹಾಗೆಯೇ ಅಲ್ಲಿನ ಜನವಸತಿ ಪ್ರದೇಶ ಪ್ರವಾಹ ಕಳೆದ ಮೂರು ವರ್ಷಗಳಿಂದ ಪ್ರವಾಹಕ್ಕೆ ತುತ್ತಾದ ಕಾರಣ ಅಲ್ಲಿನ ಅಷ್ಟೂ ಮಂದಿಯನ್ನು ಪಂಚಾಯಿತಿ ವ್ಯಾಪ್ತಿಯ ಸುಣ್ಣದಕೆರೆಯಲ್ಲಿ ನಿಗದಿಪಡಿಸಿರುವ ನಿವೇಶನಕ್ಕೆ ಸ್ಥಳಾಂತರಗೊಳಿಸಲಾಗುತ್ತದೆ. ಈ ಬಗ್ಗೆ ನಿವಾಸಿಗಳಿಗೆ ನೋಟೀಸ್ ಕೂಡ ಜಾರಿ ಮಾಡಲಾಗುತ್ತಿದೆ ಎಂದು ಪಿಡಿಓ ಶ್ಯಾಂ ತಿಳಿಸಿದ್ದಾರೆ.