ನವದೆಹಲಿ, ಸೆ. ೧೭: ಹೆಚ್ಚುತ್ತಿರುವ ಮೂಲಭೂತವಾದ ಮತ್ತು ಉಗ್ರವಾದವು ಪ್ರಾದೇಶಿಕ ಶಾಂತಿ ಮತ್ತು ಸುರಕ್ಷತೆಗೆ ದೊಡ್ಡ ಸವಾಲಾಗಿದ್ದು, ಇದರ ವಿರುದ್ಧ ಹೋರಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಗೆ ಕರೆ ನೀಡಿದ್ದಾರೆ.

೨೧ನೇ ಎಸ್ ಸಿಒ ವಾರ್ಷಿಕ ಶೃಂಗಸಭೆ ತಜಕಿಸ್ತಾನದ ದುಶಾಂಬೆಯಲ್ಲಿ ನಡೆಯುತ್ತಿದ್ದು, ವರ್ಚುವಲ್ ಮೂಲಕ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಾದೇಶಿಕ ಸಮಸ್ಯೆಗಳ ಮೂಲ ಕಾರಣ ಮೂಲಭೂತವಾದ. ಅಫಘಾನಿಸ್ತಾನದ ಇತ್ತೀಚೆಗಿನ ಬೆಳವಣಿಗೆಗಳು ಇದನ್ನು ಪುಷ್ಠಿಕರಿಸುತ್ತದೆ ಎಂದು ಹೇಳಿದರು.

ಈ ಪ್ರದೇಶದ ದೊಡ್ಡ ಸವಾಲುಗಳು ಎಂದರೆ ಶಾಂತಿ, ಭದ್ರತೆ ಮತ್ತು ವಿಶ್ವಾಸದ ಕೊರತೆ ಎಂದು ನಾನು ನಂಬುತ್ತೇನೆ. ಈ ಸಮಸ್ಯೆಗಳ ಮೂಲ ಕಾರಣ ಹೆಚ್ಚುತ್ತಿರುವ ಮೂಲಭೂತವಾದ. ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಈ ಸವಾಲನ್ನು ಹೆಚ್ಚು ಸ್ಪಷ್ಟಪಡಿಸಿದೆ ಎಂದು ಪ್ರಧಾನಿ ಹೇಳಿದರು.

ಎಸ್‌ಸಿಒ ಮೂಲಭೂತವಾದ ಮತ್ತು ಉಗ್ರವಾದದ ವಿರುದ್ಧ ಹೋರಾಡಲು ಒಂದು ವೇದಿಕೆಯನ್ನು ಸಿದ್ಧಪಡಿಸಬೇಕು. ಎಸ್‌ಸಿಒ ಇಸ್ಲಾಮ್‌ಗೆ ಸಂಬAಧಿಸಿದ ಮಧ್ಯಮ, ಸಹಿಷ್ಣು ಮತ್ತು ಅಂತರ್ಗತ ಸಂಸ್ಥೆಗಳು, ಸಂಪ್ರದಾಯಗಳ ನಡುವೆ ಬಲವಾದ ಜಾಲವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕು ಎಂದು ಮೋದಿ ಹೇಳಿದರು.

ಯುವಜನರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟ ಪ್ರಧಾನಿ ಮೋದಿ, ಸ್ಟಾರ್ಟ್ಅಪ್ ಮತ್ತು ಉದ್ಯಮಶೀಲತೆಯನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಹೊಸ-ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ತನ್ನದೇ ಕೊಡುಗೆ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮಧ್ಯ- ಏಷ್ಯಾದಲ್ಲಿ ಸಂಪರ್ಕವನ್ನು ಬಲಪಡಿಸಲು ಭಾರತವು ಬದ್ಧವಾಗಿದೆ. ಭಾರತದಲ್ಲಿ ಲಭ್ಯವಿರುವ ಮಾರುಕಟ್ಟೆಯನ್ನು ಬಳಸಿ ಇತರ ದೇಶಗಳು ಪ್ರಯೋಜನ ಪಡೆಯಬಹುದು ಎಂದು ಪ್ರಧಾನಿ ಮೋದಿ ಕರೆ ನೀಡಿದರು.