ವೀರಾಜಪೇಟೆ, ಸೆ. ೧೭: ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಿರುಚಿ ಹಿಂದೂ ದೇವಾಲಯಗಳನ್ನು ಕೆಡವಿಹಾಕಿ ನಾಶಮಾಡಿರುವ ಸರಕಾರ ಮುಖ್ಯ ಕಾರ್ಯದರ್ಶಿ, ಮೈಸೂರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿ ವೀರಾಜಪೇಟೆ ತಾಲೂಕು ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಸಂಘಟನೆ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರಕಾರಕ್ಕೆ ಮತ್ತು ಬೇಜವಾಬ್ದಾರಿ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿತು.

ಪ್ರತಿಭಟನೆಯಲ್ಲಿ ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರುಳಿಕೃಷ್ಣ ಹಸಂತಡ್ಕ ಮಾತನಾಡಿ, ಪುರಾತನವಾದ ದೇವಸ್ಥಾನಗಳನ್ನು ತೆರವುಗೊಳಿಸಿರುವುದು, ಹಿಂದೂ ಸಮಾಜದ ಭಾವನೆಗೆ ನೋವುಂಟು ಮಾಡಿರುವುದು ಖಂಡನೀಯ. ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ಧರ್ಮ ಸಂಸ್ಕೃತಿಯ ಮೇಲೆ ಚೆಲ್ಲಾಟ ಆಡುವುದು ಸರಿಯಲ್ಲ, ನಂಜನಗೂಡಿನಲ್ಲಿ ಏಕಾಏಕಿ ದೇವಸ್ಥಾನ ಕೆಡವಿರುವುದನ್ನು ಪುನರ್ ನಿರ್ಮಾಣ ಮಾಡಬೇಕು, ಇಲ್ಲವಾದಲ್ಲಿ ಹಿಂದೂ ಸಮಾಜದಿಂದ ದೇವಸ್ಥಾನವನ್ನು ಕಟ್ಟುವುದಾಗಿ ಮುರುಳಿಕೃಷ್ಣ ತಿಳಿಸಿದರು.

ಬಜರಂಗದಳ ವೀರಾಜಪೇಟೆ ತಾಲೂಕು ಅಧ್ಯಕ್ಷ ಸಣ್ಣುವಂಡ ಗಣೇಶ್ ಮೇದಪ್ಪ ಮಾತನಾಡಿ, ಸನಾತನ ಧರ್ಮವನ್ನು ಅವಹೇಳನ ಮಾಡಿರುವ ರಾಜ್ಯ ಸರಕಾರ ದೇವಾಲಯಗಳನ್ನು ನಾಶಮಾಡಿ ಮೌನವಹಿಸಿದೆ. ಸುಪ್ರೀಂಕೋರ್ಟ್ನ ಆದೇಶದಂತೆ ಪ್ರತಿಯೊಂದು ದೇವಸ್ಥಾನಗಳಿಗೂ ಪ್ರತ್ಯೇಕ ನೋಟೀಸ್ ಜಾರಿಮಾಡಿ ನಂತರ ಸ್ಥಳಾಂತರಿಸಲು ಕ್ರಮ ಜರುಗಿಸಿ ದೇವಸ್ಥಾನಗಳನ್ನು ಉಳಿಸಿ ರಕ್ಷಣೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.

ವಕೀಲ ಟಿ.ಪಿ.ಕೃಷ್ಣ ಮಾತನಾಡಿ, ವೀರಾಜಪೇಟೆಯ ಅಧಿಕಾರಿಗಳು ಪುರಾತನ ಕಾಲದ ಎರಡು ದೇವಸ್ಥಾನಗಳ ಸರ್ವೆ ಕಾರ್ಯ ನಡೆಸಿರುವುದು ತಿಳಿದು ಬಂದಿದೆ. ಕೂಡಲೇ ಸರ್ವೆಕಾರ್ಯ ಕೈಬಿಡಬೇಕು ಎಂದರು.

ಪ್ರತಿಭಟನೆಯಲ್ಲಿ ದುರ್ಗಾ ವಾಹಿನಿಯ ಅಂಬಿಕ ಉತ್ತಪ್ಪ, ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ, ಬಜರಂಗದಳ ತಾಲೂಕು ಸಂಯೋಜಕ ವಿವೇಕ್ ರೈ, ಕುಟುಂ ಪ್ರಭೋದನ್ ಟಿ.ಪಿ.ಚಂದ್ರನ್, ಜಿಲ್ಲಾ ಸಂಪರ್ಕ ಪ್ರಮುಖ್ ಪ್ರಿನ್ಸ್ ಗಣಪತಿ, ಬಿ.ವಿ ಹೇಮಂತ್ ಕಿಶನ್, ತಾಲೂಕು ಕಾರ್ಯದರ್ಶಿ ಬಿ.ಎಂ. ಕುಮಾರ್ ಸೇರಿದಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಪದಾಧಿಕಾರಿಗಳು ಭಾಗವಹಿಸಿದ್ದರು.

ಮನವಿ ಸ್ವೀಕರಿಸಿದ ಉಪ ತಹಶೀಲ್ದಾರ್ ಹೆಚ್.ಬಿ.ಪ್ರದೀಪ್ ಕುಮಾರ್ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಕಳಿಸುವುದಾಗಿ ತಿಳಿಸಿದರು.