ಕೂಡಿಗೆ, ಸೆ. ೧೭: ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಮೂಲಕ ರಾಜ್ಯದಲ್ಲಿ ಪ್ರಥಮವಾಗಿ ವಿದೇಶಿ ತಳಿಯ ಕಪ್ಪು-ಕಂದು ಬಣ್ಣದ ಹಂದಿ ಸಾಕಾಣಿಕೆ ಯೋಜನೆಯು ಕೂಡಿಗೆಯ ಹಂದಿ ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಪ್ರಾರಂಭವಾಗಿದೆ.

ಕೂಡಿಗೆ ಹಂದಿ ತಳಿ ಸಂವರ್ಧನಾ ಕೇಂದ್ರದಲ್ಲಿ ಕಳೆದ ಎಂಟು ತಿಂಗಳಿAದ ಯುನೈಟೆಡ್ ಕಿಂಗ್‌ಡA ಮತ್ತು ಕೆನಡಾ ದೇಶದ ಲ್ಯಾಂಡ್ ರೈಸ್ ಮತ್ತು ಡ್ಯೋರಕ್ ಎಂಬ ವಿದೇಶಿ ತಳಿಯ ಹಂದಿ ತಳಿಗಳ ಸಾಕಾಣಿಕೆ ಮಾಡುವ ಮೂಲಕ ರಾಜ್ಯದ ವಿವಿಧ ಸರಕಾರಿ ಹಂದಿ ತಳಿ ಅಭಿವೃದ್ಧಿ ಕೇಂದ್ರಕ್ಕೆ ಮರಿಗಳನ್ನು ನೀಡುವ ಯೋಜನೆಗೆ ಪೂರಕವಾಗಿ ಸಂತಾನೋತ್ಪತ್ತಿ ಕಾರ್ಯ ನಡೆಯುತ್ತಿದೆ.

ರಾಜ್ಯ ಸರ್ಕಾರವು ಮೊದಲು ಡ್ಯೋರಕ್ ಎಂಬ ಕಪ್ಪು- ಕಂದು ಬಣ್ಣದ ವಿದೇಶಿ ಶುದ್ಧ ತಳಿಯ ಮರಿಗಳನ್ನು ಹೊರ ರಾಜ್ಯದ ಖಾಸಗಿ ಕೇಂದ್ರದಿAದ ಆರು ತಿಂಗಳ ಒಂದು ಹಂದಿ ಮರಿಗೆ ೪೫ ಸಾವಿರ ರೂ ನಂತೆ ರಾಜ್ಯದಲ್ಲಿಯೇ ಪ್ರಥಮವಾಗಿ ೬ ಹೆಣ್ಣು ಹಂದಿ ಮರಿಗಳನ್ನು ಮತ್ತು ೨ ಗಂಡು ಹಂದಿ ಮರಿಗಳನ್ನು ಖರೀದಿ ಮಾಡಿ ಪ್ರಾಯೋಗಿಕವಾಗಿ ಸಾಕಾಣಿಕೆ ಮಾಡಲು ಜಿಲ್ಲೆಯ ಕೂಡಿಗೆ ಹಂದಿ ತಳಿ ಸಂವರ್ಧನಾ ಕೇಂದ್ರಕ್ಕೆ ನೀಡಲಾಗಿತ್ತು. ಈ ಕೇಂದ್ರದಲ್ಲಿ ಈಗಾಗಲೇ ಈ ಹಂದಿ ಮರಿಗಳನ್ನು ಸಾಕಿ ನಂತರ ಸಂತಾನೋತ್ಪತ್ತಿ ಮಾಡಲಾಗುತ್ತಿದೆ. ಈ ಕೇಂದ್ರದಲ್ಲಿ ಸಾಕಾಣಿಕೆ ಮಾಡಿ ಬೆಳೆಸಿದ ಮರಿ ಗಳನ್ನು ರಾಜ್ಯದ ವಿವಿಧ ಕಡೆಗಳಲ್ಲಿರುವ ಪಶುಪಾಲನಾ ಇಲಾಖೆಯ ಅಧೀನದ ಸರಕಾರದ ಹಂದಿ ಸಾಕಾಣಿಕೆ ಕೇಂದ್ರಕ್ಕೆ ನೀಡುವ ಮೂಲಕ ಅವುಗಳ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೂಡಿಗೆ ಹಂದಿ ತಳಿ ಸಂವರ್ಧನಾ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಜೀವ ಕುಮಾರ್ ಆರ್. ಶಿಂಧೆ ತಿಳಿಸಿದ್ದಾರೆ.

ವಿಶೇಷವಾಗಿ ಈ ಕೇಂದ್ರದಲ್ಲಿ ಇನ್ನೊಂದು ತಳಿಯಾದ ಯುನೈಟೆಡ್ ಕಿಂಗ್ಡಮ್‌ನ ಲ್ಯಾಂಡ್ ರೈಸ್ ತಳಿಯ ಹಂದಿಗಳನ್ನು ಸಾಕಲಾಗುತ್ತದೆ. ಈ ಹಂದಿ ತಳಿಯ ವೀರ್ಯ ನಳಿಕೆಗಳನ್ನು ಸರಕಾರ ಇಲಾಖೆ ಮೂಲಕ ವಿದೇಶಿದಿಂದ ತರಿಸಿ ಕೊಂಡು ಕೂಡಿಗೆ ಕೇಂದ್ರದಲ್ಲಿರುವ ಹೆಣ್ಣು ಹಂದಿಗಳಿಗೆ ಕೃತಕ ಗರ್ಭಧಾರಣೆ ಮಾಡುವ ಮೂಲಕ ಸಂತಾನೋತ್ಪತ್ತಿ ಮಾಡುವ ಕೆಲಸ ನಡೆಯುತ್ತಿದೆ. ಈ ಹಂದಿ ತಳಿಯು ಸಹ ವಿದೇಶದ ಶುದ್ಧ ತಳಿಯಾಗಿದ್ದು, ಹೆಣ್ಣು ಹಂದಿಯು ತನ್ನ ಮರಿಗಳನ್ನು ಜೋಪಾನವಾಗಿ ನೋಡಿಕೊಳ್ಳುವುದರ ಜೊತೆಗೆ ೧೫ಕ್ಕೂ ಹೆಚ್ಚು ಮರಿಗಳನ್ನು ಹಾಕುತ್ತದೆ. ಈ ಹಂದಿಯು ವರ್ಷಕ್ಕೆ ೨೭೫ ರಿಂದ ೩೦೦ ಕೆ.ಜಿ.ಗಳಷ್ಟು ತೂಕದ ಬೆಳವಣಿಗೆ ಕಾಣುತ್ತದೆ ಎಂಬ ಮಾಹಿತಿಯನ್ನು ಕೇಂದ್ರದ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಇದೇ ರೀತಿಯಲ್ಲಿ ರಾಜ್ಯ ಸರಕಾರ ಸೂಚನೆಯಂತೆ ಪಶುಪಾಲನಾ ಇಲಾಖೆಯ ಮೂಲಕ ಕೂಡಿಗೆ ಹಂದಿ ತಳಿ ಸಂವರ್ಧನಾ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ವಿದೇಶಿ ಹೊಸ ತಳಿಯಾದ ಯಾರ್ಕ್ ಶೈರ್ ತಳಿಗೆ ಕೃತಕ ಗರ್ಭಧಾರಣೆ ಮಾಡುವ ಮೂಲಕ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿ ಈ ಕೇಂದ್ರದ ಹಂದಿ ಮರಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಯ ಹಂದಿ ತಳಿ ಸಾಕಾಣಿಕಾ ಕೇಂದ್ರಕ್ಕೆ ಇಲಾಖೆಯ ಮೂಲಕ ನೀಡಲಾಗುತ್ತಿದೆ ಎಂದು ಹಂದಿ ತಳಿ ಸಂವರ್ಧನಾ ಮತ್ತು ಸಾಕಾಣಿಕೆ ತರಬೆÉÃತಿ ಕೇಂದ್ರದ ಪಶು ವೈದ್ಯಕೀಯ ಪರಿವೀಕ್ಷಕ ನಂದಕುಮಾರ್ ತಿಳಿಸಿದರು ಈ ಕೇಂದ್ರದಲ್ಲಿ ಹಂದಿ ಸಾಕಾಣಿಕೆಯು ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪಶುಪಾಲನಾ ಇಲಾಖೆಯ ಮುಖೇನ ಹೊಸ ತಳಿಗಳ ಅಭಿವೃದ್ಧಿಗೆ ಕೂಡಿಗೆಯ ಹಂದಿ ತಳಿ ಸಂವರ್ಧನಾ ಕೇಂದ್ರದಲ್ಲಿ ಸಾಕಾಣಿಕೆ ಮತ್ತು ಸಂತಾನೋತ್ಪತ್ತಿಗೆ ಹೆಚ್ಚು ಒತ್ತು ನೀಡುವ ಮೂಲಕ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಅದರಂತೆ ಕೂಡಿಗೆ ಹಂದಿ ಸಾಕಾಣಿಕೆ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯೋನ್ಮುಖರಾಗಿರುತ್ತಾರೆ.

ಈಗಾಗಲೇ ಹೊಸ ತಳಿಗಳ ಸಂತಾನೋತ್ಪತ್ತಿ ಆಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಹಂದಿ ಸಾಕಾಣಿಕೆ ಕೇಂದ್ರಕ್ಕೆ ಸರಕಾರದ ಸೂಚನೆಯಂತೆ ನೀಡಲು ಸಿದ್ಧ ವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ