ಗೋಣಿಕೊಪ್ಪಲು/ ಸಿದ್ದಾಪುರ, ಸೆ.೧೭: ಆ ಗ್ರಾಮದಲ್ಲಿ ವಿವಿಧ ಜಾತಿ,ಧರ್ಮದವರು ಅನೇಕ ವರ್ಷಗಳಿಂದ ವಾಸವಿದ್ದಾರೆ. ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿ ಸಮಸ್ಯೆ ಎದುರಾದಾಗ ಒಟ್ಟಾಗಿ ಎದುರಿಸಿ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ನ್ಯಾಯ ಪಡೆದ ಅನೇಕ ಘಟನೆಗಳಿವೆ. ಇಂತಹ ಗ್ರಾಮದಲ್ಲಿ ಅಮಾಯಕ ಯುವಕನ ಕೊಲೆ ನಡೆದಾಗ ಇಡಿ ಗ್ರಾಮವೇ ಬೆಚ್ಚಿ ಬಿದ್ದಿತ್ತು. ಕೊಲೆಗಡುಕನನ್ನು ಕಂಡುಹಿಡಿದು ಆತನನ್ನು ಜೈಲಿಗೆ ಕಳುಹಿಸಲು ಹಠಕ್ಕೆ ಬಿದ್ದರು ಘಟನೆ ನಡೆದ ಆರು ದಿನದಲ್ಲಿ ಕೊಲೆಗಾರ ಯಾರೆಂದು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿ ಪೊಲೀಸರಿಗೆ ಮಾಹಿತಿ ಒದಗಿಸಿದರು.
ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸಿದ ವೇಳೆ ಕೊಲೆ ನಡೆಸಿದಾತ ಮನೆಯ ಸಮೀಪದ ಆತನ ಚಿಕ್ಕಪ್ಪ, ಮಗ ಹಾಗೂ ಸ್ನೇಹಿತ ವ್ಯಕ್ತಿಯೇ ಆಗಿದ್ದರು.! ಇದು ಇತ್ತೀಚೆಗೆ ಕಳತ್ಮಾಡು ಗ್ರಾಮದಲ್ಲಿ ನಡೆದ ವಿಶೇಷಚೇತನ ವ್ಯಕ್ತಿಯ ಕೊಲೆ ಪ್ರಕರಣದ ಹಿನ್ನೆಲೆ.
ಇದೀಗ ಆರೋಪಿಗಳಾದ ಸುಂದರ, ಸಂದಿಪ್ ಹಾಗೂ ಸುಲೇಮಾನ್ ಎಂಬುವರನ್ನು ವಶಕ್ಕೆ ಪಡೆದ ಪೊಲೀಸರು ಕೃತ್ಯಕ್ಕೆ ಬಳಸಿದ ಬೈಕ್, ಕಾರು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮಡಿಕೇರಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್ ಹಾಗೂ ಪೊಲೀಸರು ಆರೋಪಿಗಳನ್ನು ಕರೆತಂದ ವೇಳೆ ಗ್ರಾಮಸ್ಥರ ಆಕ್ರೋಶ ಮುಗಿಲು ಮುಟ್ಟಿತ್ತು.
ಪೊಲೀಸ್ ರುಚಿ ತೋರಿಸಿದ ನಂತರ ಮಾಡಿದ ತಪ್ಪನ್ನು ಒಪ್ಪಿಕೊಂಡ ಕೊಲೆಗಾರ ಗ್ರಾಮಸ್ಥರಿಂದ ಇಡಿ ಶಾಪ ಹಾಕಿಸಿಕೊಂಡು ಇದೀಗ ಮಾಡಿದ ತಪ್ಪಿಗೆ ಜೈಲು ಸೇರಿದ್ದಾರೆ. ಗೋಣಿಕೊಪ್ಪ ಸಮೀಪದ ಕಳತ್ಮಾಡು ಗ್ರಾಮದಲ್ಲಿ ಅನೇಕ ವರ್ಷಗಳಿಂದ ವಿಶೇಷ ಚೇತನರಾದ ಉದಯ್ ಶಂಕರ್ ಗೌರಿ ಹಬ್ಬದ ರಾತ್ರಿ ಅಮಾನುಷವಾಗಿ ಹತ್ಯೆಗೀಡಾಗಿದ್ದರು.
ಯಾತಕ್ಕಾಗಿ ಕೊಲೆ...
ಇವರಿಗೆ ಸರ್ಕಾರಿ ಜಾಗವು ಮಂಜೂರಾತಿಯಾಗಿತ್ತು. ಪುಟ್ಟದಾದ ಮನೆಯನ್ನು ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಿಕೊಡಲಾಗಿತ್ತು. ವಾಸದ ಮನೆಯ
(ಮೊದಲ ಪುಟದಿಂದ) ಸಮೀಪ ಈತನ ಬಂಧುಗಳು ವಾಸವಿದ್ದರು. ಜಾಗದ ವಿಷಯದಲ್ಲಿ ಉದಯ್ ಶಂಕರ್ ಹಾಗೂ ಆತನ ಬಂಧುಗಳ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು.
ಈ ವೇಳೆ ಗ್ರಾಮಸ್ಥರು ಸೇರಿ ಇಬ್ಬರ ನಡುವೆ ಮಾತುಕತೆ ನಡೆಸಿ ಪೊಲೀಸರ ಸಮ್ಮುಖದಲ್ಲಿ ಜಾಗದ ವಿಚಾರದಲ್ಲಿ ರಾಜಿ ಮಾಡಿಸಿ ಜಗಳ ಮಾಡದಂತೆ ಎಚ್ಚರಿಕೆ ನೀಡಿ ಇಂತಿಷ್ಟು ಜಾಗವೆಂದು ನಿಗದಿಪಡಿಸಿದ ನಂತರ ಮುಚ್ಚಳಿಕೆ ಬರೆಸಿದ್ದರು. ನಂತರ ಇವರಿಬ್ಬರೂ ಜಗಳವಿಲ್ಲದೇ ಅನ್ಯೋನ್ಯತೆಯಿಂದ ಇದ್ದರು. ಆದರೆ ವಿಶೇಷ ಚೇತನನ ಆಸ್ತಿ ಮೇಲೆ ಈತನ ಸಂಬAಧಿ ಸದಾ ಕಣ್ಣಿಟ್ಟಿದ್ದರು.! ಹೇಗಾದರೂ ಸರಿ ಈತನ ಆಸ್ತಿ ಲಪಟಾಯಿಸಲು ಸಂಚು ರೂಪಿಸಿದರು.
ಕಳೆದ ಒಂದು ತಿಂಗಳ ಹಿಂದೆ ಉದಯ್ ಶಂಕರ್ನನ್ನು ದೂರದ ತಿರುಪತಿಯ ದೇವಾಲಯಕ್ಕೆ ಕರೆದೊಯ್ದು ಏನಾದರೂ ಮಾಡೋಣವೆಂದು ಯೋಜನೆ ರೂಪಿಸಿದ್ದರು. ಅಷ್ಟೊತ್ತಿಗಾಗಲೇ ಉದಯ್ ಶಂಕರ್ ಮನೆಯಲ್ಲಿ ಇಲ್ಲದ ಬಗ್ಗೆ ಗ್ರಾಮಸ್ಥರ ಅರಿವಿಗೆ ಬರುತ್ತಿದ್ದಂತೆಯೇ ವಿಷಯ ತಿಳಿದ ಇವರು ಈತನನ್ನು ರಾತ್ರೋರಾತ್ರಿ ಕರೆತಂದು ಮನೆಯಲ್ಲಿ ಬಿಟ್ಟು ದೇವಸ್ಥಾನಕ್ಕೆ ಹೋಗಿದ್ದೆವು ಎಂದು ನಾಟಕ ಆಡಿದ್ದರು.
ಕೊಲೆ ಮಾಡಿ ತಂದಿಟ್ಟರು..!
ಉದಯ್ ಶಂಕರ್ನ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಕಿರಾತಕರು ಸೆ.೯ ರಾತ್ರಿ ಸಂಚು ರೂಪಿಸಿ, ಉದಯ್ ಶಂಕರ್ಗೆ ಕಂಠ ಪೂರ್ತಿ ಕುಡಿಸಿ ರಾತ್ರಿಯ ವೇಳೆ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆತನನ್ನು ಮನೆಯಿಂದ ಕರೆದೊಯ್ದು ಕೊಲೆಗಡುಕರು ಹುಣಸೂರು, ಮೈಸೂರು ಮುಖ್ಯರಸ್ತೆಯ ಪಂಚವಳ್ಳಿ ಸಮೀಪಕ್ಕೆ ತೆರಳಿದ್ದಾರೆ. ನಂತರ ಸಮೀಪದ ನಿರ್ಜನ ಪ್ರದೇಶಕ್ಕೆ ಉದಯ್ ಶಂಕರ್ನನ್ನು ಕರೆದೊಯ್ದು ಆತನ ಮರ್ಮಾಂಗಕ್ಕೆ ಘಾಸಿಗೊಳಿಸಿ ಕೊಲೆ ಮಾಡಿದ್ದಾರೆ. ನಂತರ ಮೃತ ದೇಹವನ್ನು ಯಾರಿಗೂ ತಿಳಿಯದಂತೆ ಎಚ್ಚರ ವಹಿಸಿ ಕಾರಿನಲ್ಲಿ ತರುವ ಮೂಲಕ ಕಳತ್ಮಾಡುವಿನ ಮನೆಯಲ್ಲಿ ಮಲಗಿಸಿದ್ದಾರೆ.
ಬೆಳಿಗ್ಗೆ ಸಹಜವಾಗಿಯೇ ಮಾತನಾಡಿಸುವ ನಾಟಕವಾಡಿದ್ದಾರೆ. ಈ ವೇಳೆ ಉದಯ್ ಶಂಕರ್ ಸಾವನ್ನಪ್ಪಿರುವುದಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಆಗಮಿಸಿ ಸಹಜವಾಗಿಯೇ ವಿಧಿವಿದಾನ ನಡೆಸುವ ವೇಳೆ ಅನುಮಾನ ಎದುರಾಗಿದೆ. ಮೃತ ದೇಹವನ್ನು ಸ್ನಾನ ಮಾಡಿಸುವ ವೇಳೆ ಮರ್ಮಾಂಗಕ್ಕೆ ಘಾಸಿಯಾಗಿ ರಕ್ತ ಸುರಿದಿರುವುದು ಪತ್ತೆಯಾಗಿದೆ. ಅನುಮಾನಗೊಂಡ ಗ್ರಾಮದ ಹಿರಿಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ ವೇಳೆ ಇದೊಂದು ಕೊಲೆ ಎಂದು ಗೊತ್ತಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಗ್ರಾಮಸ್ಥರ ಸುಳಿವು..!
ಘಟನೆ ನಡೆದು ಹಲವು ದಿನ ಕಳೆದರೂ ಕೊಲೆಗಾರ ಸುಳಿವು ಮಾತ್ರ ಪೊಲೀಸರಿಗೆ ಸಿಕ್ಕಿರಲಿಲ್ಲ. ಈ ವೇಳೆ ಗ್ರಾಮದ ಮಾಜಿ ಜಿ.ಪಂ.ಸದಸ್ಯರೊಬ್ಬರು ಪೊಲೀಸರಿಗೆ ಸಂಶಯಾಸ್ಪದ ವ್ಯಕ್ತಿಯ ಮೇಲೆ ಮಾಹಿತಿ ಒದಗಿಸಿದ್ದರು. ಈ ಆದಾರದ ಮೇಲೆ ಆತನನ್ನು ತನಿಖೆಗೆ ಒಳಪಡಿಸಿದ ವೇಳೆ ಸತ್ಯಾಂಶ ಹೊರಬಿದ್ದಿದೆ.
ಚಿಕ್ಕಪ್ಪನಿಂದಲೇ ಕೃತ್ಯ
ಕೊಲೆಯಾದ ಉದಯ್ ಶಂಕರ್ ವಾಸವಿರುವ ಮನೆ ಹಾಗೂ ೮೦ ಸೆಂಟ್ ಜಾಗದ ಮೇಲೆ ಹಲವು ಸಮಯದಿಂದ ಕಣ್ಣಿಟ್ಟಿದ್ದ ಸ್ವತಃ ಚಿಕ್ಕಪ್ಪನಾದ ಸುಂದರ ಅವಕಾಶಕ್ಕಾಗಿ ಕಾಯುತ್ತಿದ್ದ. ಗ್ರಾಮದ ಜನತೆ ಉದಯ್ ಪರವಾಗಿದ್ದ ಕಾರಣ ಇದು ಯಶಸ್ವಿಯಾಗಿರಲಿಲ್ಲ. ಈ ವಿಚಾರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ತನ್ನ ಮಗನಾದ ಸಂದಿಪ್ ನೊಂದಿಗೆ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮಗ ಸಂದೀಪನ ಸ್ನೇಹಿತನಾದ ಸುಲೇಮಾನ್ ಸಹಾಯ ಪಡೆದು ಉಪಾಯ ರೂಪಿಸಿದ್ದಾರೆ. ಸುಲೇಮಾನ್ಗೆ ಪಂಚವಳ್ಳಿ ಸಮೀಪ ಪರಿಚಯವಿರುವ ಕಾರಣ ಆತನ ಸಹಕಾರ ಪಡೆದು ವಿಶೇಷಚೇತನನಾದ ಉದಯ್ ಶಂಕರ್ನನ್ನು ಮನವೊಲಿಸಿ ರಾತ್ರಿಯ ವೇಳೆ ಪಂಚವಳ್ಳಿ ಸಮೀಪಕ್ಕೆ ಕರೆದೊಯ್ದು ಕೃತ್ಯ ನಡೆಸಿ ಯಾರಿಗೂ ಅರಿವಿಲ್ಲದಂತೆ ಮೃತ ದೇಹವನ್ನು ತಂದು ಆತನ ಮನೆಯಲ್ಲಿ ಮಲಗಿಸಿದ ನಂತರ ಏನು ಅರಿವಿಲ್ಲದಂತೆ ನಾಟಕ ಮಾಡಿದ್ದರು ಎಂಬದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಆರೋಪಿಗಳನ್ನು ಊರಿನಿಂದ ದೂರವಿಡಲು ನಿರ್ಧಾರ
ಗ್ರಾಮದಲ್ಲಿ ಸದಾ ಒಗ್ಗಟ್ಟಿನಿಂದ ಇದ್ದ ಗ್ರಾಮದ ಜನತೆ ಇಂತಹ ಘಟನೆಯಿಂದ ನೊಂದಿದ್ದಾರೆ. ಆರೋಪಿತರನ್ನು ಪೊಲೀಸರು ತಮ್ಮ ಜೀಪಿನಲ್ಲಿ ಕರೆತಂದ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಮಾಯಕನ ಜೀವ ತೆಗೆದವರನ್ನು ಊರಿಗೆ ಸೇರಿಸಬಾರದು, ಎಲ್ಲರಿಗೂ ಕಠಿಣ ಶಿಕ್ಷೆಗೆ ಗುರಿಪಡಿಸಿ ಇಂತವರಿAದ ನಮ್ಮ ಗ್ರಾಮಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಬಹುತೇಕ ಮಹಿಳೆಯರು ಪೊಲೀಸರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿಗಳನ್ನು ಪೊಲೀಸರು ಗ್ರಾಮಕ್ಕೆ ಕರೆತಂದ ವೇಳೆ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಿರಿಯ ಮುಖಂಡರು, ಮಾಜಿ ಜಿ.ಪಂ.ಸದಸ್ಯರು ಸೇರಿದಂತೆ ಗ್ರಾಮದ ನೂರಾರು ಮಂದಿ ನೆರೆದಿದ್ದರು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಹಾಗೂ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಮಡಿಕೇರಿ ವೃತ್ತನಿರೀಕ್ಷಕ ಪಿ.ವಿ. ವೆಂಕಟೇಶ್ ಹಾಗೂ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಸಹಾಯಕ ಠಾಣಾಧಿಕಾರಿ ಎನ್.ಟಿ. ತಮ್ಮಯ್ಯ, ಮುಖ್ಯಪೇದೆಗಳಾದ ರತನ್ ಟಿ.ಜೆ., ಲಕ್ಷಿö್ಮÃಕಾಂತ್, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ವಸಂತ್ ಕುಮಾರ್ ಹೆಚ್.ಕೆ., ಮಲ್ಲಪ್ಪ ಮುಶಿಗೇರಿ, ಸಿಡಿಆರ್ನ ಸಿಬ್ಬಂದಿಗಳಾದ ರಾಜೇಶ್ ಹಾಗೂ ಗಿರೀಶ್, ಚಾಲಕರಾದ ಗೋವರ್ಧನ್ ಇನ್ನಿತರರು ಪಾಲ್ಗೊಂಡಿದ್ದರು.
- ವರದಿ: ಹೆಚ್.ಕೆ. ಜಗದೀಶ್, ವಾಸು ಎ.ಎನ್.