ಮಡಿಕೇರಿ, ಸೆ. ೧೬: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ದರ ಶೇ.೨ ಕ್ಕಿಂತ ಕಡಿಮೆ ದಾಖಲಾಗಿರುವ ಕಾರಣ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾ.೧೭ ರಿಂದ (ಇಂದಿನಿAದ) ಜಿಲ್ಲೆಯಲ್ಲಿ ೯, ೧೦ನೇ ತರಗತಿ ಹಾಗೂ ಪದವಿ ಪೂರ್ವಕಾಲೇಜುಗಳನ್ನು ಪುನರಾರಂಭ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಗತ್ಯ ಪೂರ್ವ ತಯಾರಿಗಳನ್ನು ಕೈಗೊಂಡಿದೆ.

ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ‘ಶಕ್ತಿ’ ಗೆ ಪ.ಪೂ.ಶಿ.ಇ. ಉಪನಿರ್ದೇಶಕ ವಿಷ್ಣುಮೂರ್ತಿ ಅವರು ಮಾಹಿತಿ ನೀಡಿದ್ದು, ನಿನ್ನೆ ದಿನ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರೊAದಿಗೆ ಗೂಗಲ್ ಮೀಟ್ ಮೂಲಕ ಚರ್ಚಿಸಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸುತ್ತೋಲೆ ಅನ್ವಯ ಸಿದ್ಧತೆಗಳನ್ನು ನಡೆಸಲು ಸೂಚನೆ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಬೋಧನಾ ಕೊಠಡಿ ಪ್ರಯೋಗಾಲಯ ಹಾಗೂ ಇನ್ನಿತರ ಪ್ರದೇಶಗಳನ್ನು ಸ್ಯಾನಿಟೈಸ್ ಮಾಡುವ ಕಾರ್ಯ ನಡೆದಿದ್ದು, ಶೌಚಾಲಯಗಳನ್ನು ಸಮರ್ಪಕವಾಗಿ ಶುಚಿಗೊಳಿಸಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಕಾಲೇಜುಗಳಲ್ಲಿ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕಿçÃನಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಕನಿಷ್ಟ ೧ ಡೋಸ್ ಕೋವಿಡ್ ನಿರೋಧಕ ಲಸಿಕೆ ಪಡೆದಿರುತ್ತಾರೆ. ೧೮ ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಇನ್ನೂ ಬಾರದಿರುವುದರಿಂದ ಕಾಲೇಜಿಗೆ ಬರುವ ಮಕ್ಕಳು ತಮ್ಮ ಪೋಷಕರಿಂದ ಕೋವಿಡ್‌ನ ಯಾವುದೇ ಲಕ್ಷಣಗಳಿಲ್ಲದಿರುವ ಬಗ್ಗೆ ದೃಢೀಕರಣ ಪತ್ರ ತರಬೇಕಾಗುತ್ತದೆ. ಭೌತಿಕ ತರಗತಿಗಳಿಗೆ ಹಾಜರಾಗದ ಮಕ್ಕಳಿಗೆ ಭೌತಿಕ ತರಗತಿಗಳಲ್ಲೇ ಆನ್‌ಲೈನ್ ತರಗತಿಗಳನ್ನು ಮುಂದುವರಿಸಲಾಗುತ್ತದೆ.

ಯಾವುದೇ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ೧೦೦ಕ್ಕಿಂತ ಕಡಿಮೆಯಿದ್ದು, ವಿಶಾಲವಾದ ಕೊಠಡಿಗಳಿದ್ದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ಇಲ್ಲವಾದರೆ ಶೇ. ೫೦ ರಷ್ಟು ವಿದ್ಯಾರ್ಥಿಗಳಿಗೆ ವಾರದ ಮೊದಲ ಮೂರು ದಿನ ಭೌತಿಕ ತರಗತಿ, ಉಳಿದವರಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು. ವಾರದ ಕೊನೆಯ ಮೂರು ದಿನ ಆನ್‌ಲೈನ್ ತರಗತಿ ಹಾಜರಾದ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ; ಭೌತಿಕ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗುವಂತೆ ಕ್ರಮ ವಹಿಸಲಾಗುವುದು.

ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ, ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳ ಪೋಷಕರು ಕೋವಿಡ್ ಲಸಿಕೆ ಪಡೆದುಕೊಂಡಿರಬೇಕು. ಈ ಬಗ್ಗೆ ಪ್ರಾಂಶುಪಾಲರುಗಳು ಪೋಷಕರಿಗೆ ತಿಳಿಸಿ ಹೇಳಿ ಲಸಿಕೆ ಪಡೆಯುವಂತೆ ಮಾಡಬೇಕು. ಎಂಬಿತ್ಯಾದಿ ಸೂಚನೆಗಳು ಪ.ಪೂ.ಶಿ.ಇಲಾಖೆಯಿಂದ ಬಂದಿದ್ದು, ಅವೆಲ್ಲವನ್ನು ಕೂಡ ಪಾಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ

(ಮೊದಲ ಪುಟದಿಂದ) ವಿಷ್ಣುಮೂರ್ತಿಯವರು, ಕಾಲೇಜುಗಳಿಗೆ ಭೇಟಿ ನೀಡಿ ಸೂಚನೆಗಳು ಪಾಲನೆಯಾಗುತ್ತಿವೆಯೆ ಎಂಬ ಬಗ್ಗೆ ಪರಿಶೀಲಿಸಲು ಮೂವರು ಪ್ರಾಂಶುಪಾಲರ ತಂಡವನ್ನು ಕೂಡ ರಚನೆ ಮಾಡಲಾಗಿದೆ. ಬೆಳಿಗ್ಗೆ ೯.೩೦ ರಿಂದ ಸಂಜೆ ೩.೩೦ರವರೆಗೆ ತರಗತಿಗಳು ನಡೆಯಲಿವೆ ಎಂದು ಮಾಹಿತಿಯಿತ್ತರು.

ಶಾಲೆಗಳಲ್ಲೂ ಕ್ರಮ

೯ ಮತ್ತು ೧೦ನೇ ತರಗತಿಗಳನ್ನು ಪ್ರಾರಂಭ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರುಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಧರನ್ ತಿಳಿಸಿದ್ದಾರೆ. ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವುದರೊಂದಿಗೆ ಭೌತಿಕ ತರಗತಿ ಹಾಗೂ ಆನ್‌ಲೈನ್ ತರಗತಿ ಮುಂದುವರಿಯಲಿದೆ. ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ಕೋವಿಡ್ ನಿರೋಧಕ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದ್ದು ೧೮ ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಬಾರದ ಕಾರಣ ರೋಗ ಲಕ್ಷಣಗಳಿಲ್ಲದ ಬಗ್ಗೆ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರದೊಂದಿಗೆ ಶಾಲೆೆಗಳಿಗೆ ಬರಬಹುದು. ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣ ಕಂಡು ಬಂದರೆ ಪ್ರವೇಶಕ್ಕೆ ಅವಕಾಶವಿಲ್ಲ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧.೩೦ ಗಂಟೆಯವರೆಗೆ ತರಗತಿಗಳು ನಡೆಯಲಿವೆ. ಹೆಚ್ಚು ವಿದ್ಯಾರ್ಥಿಗಳು ಬಂದಲ್ಲಿ ವಿಭಜನೆ ಮಾಡಿಕೊಂಡು ತರಗತಿಗಳನ್ನು ನಡೆಸಲಾಗುತ್ತದೆ. ಕೋವಿಡ್ ನಿಯಮಗಳ ಪಾಲನೆಯೊಂದಿಗೆ ತರಗತಿಗಳನ್ನು ನಡೆಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನೂ ಕೈಗೊಳ್ಳಲಾಗಿದೆ ಎಂದು ಶ್ರೀಧರನ್ ತಿಳಿಸಿದ್ದಾರೆ.

-ಉಜ್ವಲ್ ರಂಜಿತ್