ಬೆAಗಳೂರು, ಸೆ. ೧೬: ಕೊಡವ ಜನಾಂಗ ಹಾಗೂ ಜಮ್ಮಾ ಹಿಡುವಳಿದಾರರಿಗೆ ಇರುವ ಕೋವಿ ಹಕ್ಕು ವಿನಾಯಿತಿ ಕುರಿತಾದ ವಿಚಾರ ಇಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದು ಸುದೀರ್ಘ ವಿಚಾರಣೆ ನಡೆದಿದೆ. ಚೀಫ್ ಜಸ್ಟೀಸ್ ಸತೀಶ್ ಚಂದ್ರ ಶರ್ಮ ಹಾಗೂ ಜಸ್ಟೀಸ್ ಸಚಿನ್ ಮುಗ್ದುರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿದ್ದು ತೀರ್ಪನ್ನು ಕಾಯ್ದಿರಿಸಲಾಗಿದೆ. ಈ ಮೂಲಕ ಕೋವಿ ಹಕ್ಕು ವಿಚಾರ ನಿರ್ಣಾಯಕ ಹಂತಕ್ಕೆ ತಲುಪಿದೆ.
ಈ ವಿಶೇಷ ವಿನಾಯಿತಿ ಹಕ್ಕನ್ನು ಪ್ರಶ್ನಿಸಿ ಕೊಡಗಿನವರೇ ಆದ ಕ್ಯಾಪ್ಟನ್ ಯಾಲದಾಳು ಚೇತನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ತಮ್ಮನ್ನು ಪ್ರತಿವಾದಿಗಳಾದಿ ಪರಿಗಣಿಸುವಂತೆ ಬಳಿಕ ಅಖಿಲ ಕೊಡವ ಸಮಾಜ ಫೆಡರೇಶನ್ ಆಫ್ ಕೊಡವ ಸಮಾಜ, ಸಿ.ಎನ್.ಸಿ., ಯುಕೋ, ಬೆಂಗಳೂರು ಕೊಡವ ಸಮಾಜ ಸೇರಿದಂತೆ ಇತರ ಕೆಲವು ಸಂಘಟನೆ - ಸಮಾಜಗಳು ನ್ಯಾಯಾಲಯಕ್ಕೆ ತಮ್ಮ ಅಹವಾಲನ್ನು ಸಲ್ಲಿಸಿದ್ದರು. ಇಂದು ಈ ಕುರಿತಾಗಿ ಅರ್ಜಿದಾರರ ಪರ ವಕೀಲರು, ಪ್ರತಿವಾದಿಗಳು, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ವಕೀಲರುಗಳ ಸಹಿತವಾಗಿ ವಾದ-ವಿವಾದಗಳು ನಡೆಯಿತು. ಬಳಿಕ ತೀರ್ಪನ್ನು ಕಾಯ್ದಿರಿಸಿ ನ್ಯಾಯಾಲಯ ಆದೇಶ ನೀಡಿದೆ.
ಪ್ರತಿವಾದಿಗಳ ಪರವಾಗಿ ವಕೀಲರುಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮೇರಿಯಂಡ ಸಜನ್ ಪೂವಯ್ಯ, ಮಾಳೇಟಿರ ಧ್ಯಾನ್ ಚಿಣ್ಣಪ್ಪ, ಮಲ್ಲೇಂಗಡ ಗಗನ್ ಬೆಳ್ಳಿಯಪ್ಪ, ಮುಕ್ಕಾಟಿರ ಟಿ. ನಾಣಯ್ಯ, ಕಾಂಗೀರ ಭೀಮಯ್ಯ, ಐಚಟ್ಟಿರ ರಾಲಿ ಮುದ್ದಪ್ಪ, ಚಂದಪAಡ ನರೇನ್ ಸೇರಿದಂತೆ ಇತರ ವಕೀಲರುಗಳು ಪಾಲ್ಗೊಂಡಿದ್ದರು. ಅರ್ಜಿದಾರರ ಪರವಾಗಿ ವಕೀಲರಾದ ವಿದ್ಯುಲ್ಲತಾ ಕೇಂದ್ರ ಸರಕಾರದ ಪರವಾಗಿ ಎಡಿಷನಲ್ ಸಾಲಿಸಿಟರ್ ಜನರಲ್ ಎನ್.ಬಿ. ನರಗುಂದ್, ರಾಜ್ಯ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ವಿಜಯಕುಮಾರ್ ಪಾಟೀಲ್ ಭಾಗವಹಿಸಿದ್ದರು.
ಇದೀಗ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದ್ದು ಮುಂದಿನ ಆದೇಶ ಯಾವ ರೀತಿ ಪ್ರಕಟಗೊಳ್ಳಲಿದೆ ಎಂದು ಕುತೂಹಲ ಮೂಡಿದೆ.