ಮಡಿಕೇರಿ, ಸೆ. ೧೫: ಸೋಮವಾರಪೇಟೆ ತಾಲೂಕಿನ ಕೋಟೆಬೆಟ್ಟ ದೇವಾಲಯದ ಪಾವಿತ್ರ‍್ಯತೆಗೆ ಪ್ರವಾಸಿಗರಿಂದ ದಕ್ಕೆಯುಂಟಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆತಡೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರಾದ ಸಚಿನ್, ಇತ್ತೀಚಿನ ದಿನಗಳಲ್ಲಿ ಕೋಟೆಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ ಕಿರಿದಾದ ರಸ್ತೆಯಲ್ಲಿ ಸಂಚರಿಸಲು ಗ್ರಾಮಸ್ಥರಿಗೆ ತೊಡಕುಂಟಾಗುತ್ತಿದೆ. ಜೊತೆಗೆ ಕೋಟೆಬೆಟ್ಟ ದೇವಾಲಯಕ್ಕೆ ಚಪ್ಪಲಿ ಹಾಕಿಕೊಂಡು ಹೋಗುವುದು, ಮದ್ಯ ಸೇವಿಸಿ ಮೋಜು ಮಸ್ತಿ ಮಾಡುವುದು, ಜಲಪಾತಗಳಲ್ಲಿ ಮನಬಂದAತೆ ವರ್ತಿಸುವುದು ಸೇರಿದಂತೆ ಇತರ ಚಟುವಟಿಕೆಗಳಿಂದ ಸ್ಥಳೀಯರಿಗೆ ಸಮಸ್ಯೆಯುಂಟಾಗುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಗರ್ವಾಲೆ ಗ್ರಾ.ಪಂ.ಗೆ ಒಳಪಡುವ ಶಿರಂಗಳ್ಳಿ, ಕಿರುದಾಲೆ, ಗರ್ವಾಲೆ, ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯಾ ಗ್ರಾಮಸ್ಥರೆಲ್ಲರೂ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಅರಣ್ಯಾಧಿಕಾರಿ ಮತ್ತು ಸಿಇಓಗೆ ಮನವಿ ಸಲ್ಲಿಸಿದ್ದೇವೆ. ತಾ. ೧೭ ರವರೆಗೆ ಶಾಶ್ವತ ಪರಿಹಾರಕ್ಕೆ ಗಡುವು ನೀಡಲಾಗಿದ್ದು, ಬೇಡಿಕೆ ಈಡೇರದಿದ್ದಲ್ಲಿ ತಾ. ೧೮ ರಂದು ಶಿರಂಗಳ್ಳಿ ಬಸ್ ತಂಗುದಾಣ ಬಳಿ ರಸ್ತೆತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಗ್ರಾಮಸ್ಥರಾದ ಸೋಮಯ್ಯ, ಲೋಹಿತ್, ಅಶೋಕ್, ಸನ್ನಿಕಾರ್ಯಪ್ಪ, ನಾಣಿಯಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಮಡಿಕೇರಿ, ಸೆ. ೧೫: ಗರ್ವಾಲೆ ಕೋಟೆಬೆಟ್ಟ ದೇವಸ್ಥಾನಕ್ಕೆ ಪುರಾತನ ಕಾಲದಿಂದ ದಾರಿಯನ್ನು ಮಾಡಿ, ದೇವರ ಗುಡಿಯನ್ನು ಮತ್ತು ಅದರಲ್ಲಿರುವ ಮೀನುಗಳನ್ನು ಮತ್ತು ಊದನಕಲ್ಲನ್ನೂ ಉಳಿಸಿಕೊಂಡು ಬಂದಿದ್ದು, ನಮ್ಮ ಗ್ರಾಮದ ದೇವಸ್ಥಾನದ ಕಟ್ಟುಪಾಡುಗಳ ಬಗ್ಗೆ ಶುಚಿತ್ವದ ಬಗ್ಗೆ ಅದನ್ನು ಕಾಯ್ದುಕೊಳ್ಳುವ ಬಗ್ಗೆ ನಮಗೆ ಕಾಳಜಿಯಿದೆ ಎಂದು ಗರ್ವಾಲೆ ಗ್ರಾಮಾಭಿವೃದ್ಧಿ ಸಮಿತಿ ಹೇಳಿಕೆ ನೀಡಿದೆ.
ಗ್ರಾಮಸ್ಥರು ಯಾತ್ರಾರ್ಥಿಗಳಿಗೆ, ಪ್ರವಾಸಿಗರಿಗೆ, ಭಕ್ತಾದಿಗಳಿಗೆ ಯಾವುದೇ ತೊಂದರೆಯನ್ನು ನೀಡದೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಶುಚಿತ್ವದ ಬಗ್ಗೆ, ದೇವರ ಗುಂಡಿಯ ಮೀನು ಮತ್ತು ಹರಕೆಯ ಬಗ್ಗೆ ಊದನಕಲ್ಲಿನ ಪೂಜೆಯ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿ ಕಳುಹಿಸುತ್ತಿದ್ದೇವೆ. ಆದರೆ ಕೆಲವರು ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆಂದು ಸಮಿತಿ ಆಡಳಿತ ಮಂಡಳಿ ಆಪಾದಿಸಿದೆ.
ಈ ಎಲ್ಲಾ ನಿರ್ವಹಣಾ ವೆಚ್ಚಕ್ಕಾಗಿ ನಾವು ಗರ್ವಾಲೆ ಗ್ರಾಮದಲ್ಲಿ ಒಂದು ಗೇಟನ್ನು ಮಾಡಿ ಸಣ್ಣ ಪ್ರಮಾಣದ ನಿರ್ವಹಣಾ ವೆಚ್ಚವನ್ನು ಯಾತ್ರಾರ್ಥಿಗಳಿಂದ ತೆಗೆದುಕೊಳ್ಳುತ್ತಿದ್ದೇವೆ ಮತ್ತು ಅದನ್ನು ದೇವಸ್ಥಾನದ, ದೇವರಗುಂಡಿಯ, ಊದನಕಲ್ಲಿನ ಭದ್ರತೆ ಮತ್ತು ಅಭಿವೃದ್ಧಿ ಮತ್ತು ಶುಚಿತ್ವಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ. ಆದರೆ ಕೆಲವರು ಸಾರ್ವಜನಿಕರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸಿ ಗ್ರಾಮ ಗ್ರಾಮಗಳ ಮಧ್ಯೆ ಸಾಮರಸ್ಯವನ್ನು ಕೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೆಲವರು ಸರಕಾರಿ ಜಮೀನಿನಲ್ಲಿ ತೋಟವನ್ನು ಮಾಡಿಕೊಂಡು ಪರಿಸರ ನಾಶ ಮಾಡಿದ್ದು, ಈ ಬಗ್ಗೆ ಕೆಲಸಮಯದಿಂದ ನಮ್ಮ ಗ್ರಾಮದ ಸರಕಾರಿ ಜಮೀನಿನಲ್ಲಿ ಮರಗಳ್ಳತನ ಮಾಡುತ್ತಿದ್ದರು. ನಾವುಗಳು ಗೇಟ್ ವ್ಯವಸ್ಥೆ ಮತ್ತು ಸಮಯ ನಿಬಂಧನೆ ಮಾಡಿದ್ದರಿಂದ ಅವರಿಗೆ ತೊಡಕಾಗಿರುವುದರಿಂದ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂದಿದ್ದಾರೆ. ಲಿಖಿತ ಹೇಳಿಕೆ ನೀಡಿರುವ ಗ್ರಾಮಾಭಿವೃದ್ಧಿ ಅಧ್ಯಕ್ಷ ದೊಡ್ಡೇರ ಬೆಳ್ಯಪ್ಪ, ಕಾರ್ಯದರ್ಶಿ ಐ.ಕೆ. ಮಾಚಯ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಸುಭಾಷ್, ದೇವಸ್ಥಾನ ತಕ್ಕ ಮುಖ್ಯಸ್ಥ ತಾಚಮಂಡ ಈರಪ್ಪ, ದೇವಸ್ಥಾನ ಸಮಿತಿ ಸದಸ್ಯ ಪಾಸುರ ಕರುಂಬಯ್ಯ ಹಾಗೂ ಗ್ರಾಮಾಭಿವೃದ್ಧಿ ಸದಸ್ಯ ಕನ್ನಿಕಂಡ ದಿಲೀಪ್ ಇವರುಗಳು ಹಲವರು ಗ್ರಾಮಸ್ಥರ ಮತ್ತು ಗ್ರಾಮದ ಹೆಸರನ್ನು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.