ಕರಿಕೆ, ಸೆ. ೧೫: ಕೆಲದಿನಗಳಿಂದ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಕಾಣಿಸಿಕೊಂಡ ಕಾರಣ ಇದೀಗ ಪ್ರತಿ ಮನೆಯ ಪಶುಗಳಿಗೆ ಪಶು ವೈದ್ಯಕೀಯ ಇಲಾಖೆ ವತಿಯಿಂದ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕೆಲದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಮನವಿ ನೀಡಿದ ಗ್ರಾಮಸ್ಥರು, ಕರಿಕೆಯಲ್ಲಿ ಪಶುವೈದ್ಯ ಹುದ್ದೆ ಖಾಲಿ ಇದ್ದು, ಗ್ರಾಮದಲ್ಲಿ ಯಾವುದೇ ಚಿಕಿತ್ಸೆ ಲಭ್ಯವಿಲ್ಲ.

ಕೋವಿಡ್ ಹಿನ್ನೆಲೆ ನೆರೆಯ ಕೇರಳದಿಂದ ವೈದ್ಯರನ್ನು ಕರೆತರಲು ಸಾಧ್ಯವಿಲ್ಲ ಹಾಗೂ ಅಲ್ಲಿ ಲಸಿಕೆ ಕೂಡ ಲಭ್ಯವಿಲ್ಲದ ಕಾರಣ ಸರಕಾರದ ಮಟ್ಟದಲ್ಲಿ ಗ್ರಾಮಕ್ಕೆ ಲಸಿಕೆ ಒದಗಿಸಲು ಕ್ರಮ ವಹಿಸುವಂತೆ ಗಮನ ಸೆಳೆದಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಶಾಸಕರು ಸಂಬAಧಿಸಿದ ಇಲಾಖೆಗೆ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದರು. ಅಲ್ಲದೇ ‘ಶಕ್ತಿ’ ಕೂಡ ಜಿಲ್ಲಾಡಳಿತ ಲಸಿಕೆ ನೀಡಲು ಕ್ರಮವಹಿಸುವಂತೆ ವರದಿ ಮಾಡಿ ಗಮನ ಸೆಳೆದಿತ್ತು.

ಇದೀಗ ಕಳೆದ ಎರಡು ದಿನಗಳಿಂದ ನಾಪೋಕ್ಲು ಪಶುವೈದ್ಯಾಧಿಕಾರಿ ಹಾಗೂ ತಂಡದವರು ಗ್ರಾಮದ ಪ್ರತಿ ಮನೆಗೆ ತೆರಳಿ ರೋಗ ಪತ್ತೆಯಾದ ಗೋವುಗಳಿಗೆ ರೋಗನಿರೋಧಕ ಚುಚ್ಚು ಮದ್ದು ನೀಡುತ್ತಿದ್ದಾರೆ. ಇತರೆ ಗೋವುಗಳಿಗೆ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಾಲುಬಾಯಿ ಜ್ವರ ಲಸಿಕೆ ನೀಡಲಾಗುತ್ತಿದೆ.