ಮಡಿಕೇರಿ, ಸೆ. ೧೫ : ಮಲೆನಾಡು ಪ್ರದೇಶವಾಗಿದ್ದು, ಕಾಫಿ ತೋಟಗಳಿಂದ ಕೂಡಿರುವ ಕೊಡಗು ಜಿಲ್ಲೆಗೆ ಅಸ್ಸಾಂ ಸೇರಿದಂತೆ ಪರರಾಜ್ಯದ ಕಾರ್ಮಿಕರು ಹೆಚ್ಚಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇವರುಗಳ ಬಗ್ಗೆ ಪೊಲೀಸ್ ಆಂತರಿಕ ಭದ್ರತಾ ವಿಭಾಗದ ಮೂಲಕ ಮಾಹಿತಿ ಕಲೆಹಾಕುವ ಕೆಲಸ ನಡೆಯುತ್ತಿದೆ. ಪ್ರಸ್ತುತ ಕಾಫಿ ತೋಟಗಳ ಕೆಲಸ - ಕಾರ್ಯಗಳು ಬಿರುಸುಗೊಳ್ಳುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಕೊಡಗಿನತ್ತ ಆಗಮಿಸುತ್ತಿದ್ದಾರೆ. ಈ ರೀತಿ ಬರುತ್ತಿರುವ ಕಾರ್ಮಿಕರ ಬಗ್ಗೆ ತೋಟ ಮಾಲೀಕರು ಸೂಕ್ತ ವಿವರ - ದಾಖಲೆಗಳನ್ನು ಸಂಗ್ರಹಿಸಿ ಅವರ ಭಾವಚಿತ್ರದ ಸಹಿತವಾಗಿ ಆಂತರಿಕ ಭದ್ರತಾ ವಿಭಾಗಕ್ಕೆ ಸಲ್ಲಿಸುವಂತೆ ಪೊಲೀಸ್ ಇಲಾಖೆ ಈಗಾಗಲೇ ಸೂಚನೆಯನ್ನು ನೀಡಿರುವದಾಗಿ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಮಿಕರಿಗೆ ಸಂಬAಧಿಸಿದAತೆ ಅವರ ಆಧಾರ್‌ಕಾರ್ಡ್, ವೋಟರ್ ಐಡಿ, ಭಾವಚಿತ್ರದ ದಾಖಲೆಯನ್ನು ತೋಟ ಮಾಲೀಕರು ನೀಡಬೇಕಾಗಿದೆ. ಈ ಕುರಿತಾಗಿ ಬೆಳೆಗಾರರಲ್ಲಿ ಹಾಗೂ ಬೆಳೆಗಾರ ಸಂಘಟನೆಗಳ ಮೂಲಕವೂ ಮನವಿ ಮಾಡಲಾಗಿದೆ ಎಂದು ಇಲಾಖೆಯ ಅಧಿಕಾರಿ ಜಯಕುಮಾರ್ ಅವರು ‘ಶಕ್ತಿ’ಗೆ ಪ್ರತಿಕ್ರಿಯಿಸಿದರು.

ಪ್ರಸ್ತುತ ಸುಮಾರು ೫೦೦ ರಷ್ಟು ಕಾರ್ಮಿಕರ ದಾಖಲೆ ಸಂಗ್ರಹಾತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು ೧೦ ಸಾವಿರದಷ್ಟು ಬೆಳೆಗಾರರಿದ್ದು, ಇವರ ತೋಟಗಳಿಗೆ ಕಾರ್ಮಿಕರು ಹೆಚ್ಚಾಗಿ ಆಗಮಿಸುತ್ತಿದ್ದಾರೆನ್ನಲಾಗಿದೆ. ಬಹುತೇಕವಾಗಿ ಅಸ್ಸಾಂ ರಾಜ್ಯದ ಗುವಾಹಟಿ ಮೂಲದವರು ಹೆಚ್ಚಾಗಿ ಬರುತ್ತಿದ್ದಾರೆ. ಇವರಲ್ಲಿ ಕೆಲವಾರು ಮಂದಿ ಹಲವು ವರ್ಷದಿಂದ ಸಂಪರ್ಕ ಹೊಂದಿರುವವರಾಗಿದ್ದು, ಬಂದು ಹೋಗುವವರಾಗಿದ್ದಾರೆ. ಇದರೊಂದಿಗೆ ಉತ್ತರ ಭಾರತದ ಇತರ ಕೆಲವು ರಾಜ್ಯ ದಿಂದಲೂ ಹೊಸಬರು ಆಗಮಿಸುತ್ತಿರುವ ಮಾಹಿತಿ ಇದೆ.

ಇಲಾಖೆ ಈ ಬಗ್ಗೆ ಗಂಭೀರವಾದ ಗಮನವನ್ನು ಹರಿಸುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ಹೊಸ ಮುಖಗಳ ದಾಖಲಾತಿಗಳನ್ನು ಕಲೆಹಾಕುವ ಪ್ರಯತ್ನ ನಡೆಸುತ್ತಿದೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ‘ಶಕ್ತಿ’ಯಲ್ಲಿ ವಿಸ್ತೃತವಾದ ವರದಿಯನ್ನು ಪ್ರಕಟಿಸಲಾಗಿತ್ತು. ಈ ವರದಿಯ ಕುರಿತಾಗಿ ಪ್ರತಿಕ್ರಿಯಿಸಿರುವ ಮಡಿಕೇರಿಯ ವೈದ್ಯರೂ ಆಗಿರುವ ಡಾ|| ರವಿ ಅಪ್ಪಾಜಿ ಅವರು ಪ್ರಸ್ತುತ ಸನ್ನಿವೇಶದಲ್ಲಿ ‘ಶಕ್ತಿ’ ಈ ಬಗ್ಗೆ ಸಂದರ್ಭೋಚಿತವಾಗಿ ಬೆಳಕು ಚೆಲ್ಲಿದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುವದರೊಂದಿಗೆ ತೋಟಗಳಿಗೂ ಭೇಟಿಯಿತ್ತು ಮಾಹಿತಿ ಕಲೆ ಹಾಕಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಬೆಳೆಗಾರರು ಕೂಡ ಇಲಾಖೆಗೆ ಈ ಬಗ್ಗೆ ಸೂಕ್ತ ರೀತಿಯಲ್ಲಿ ಸ್ಪಂದನ ನೀಡಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.