ಮಡಿಕೇರಿ, ಸೆ. ೧೫: ಕೊಡಗು ಜಿಲ್ಲೆಯಲ್ಲಿ ತಾ. ೧೭ ರಂದು ಬೃಹತ್ ಕೋವಿಡ್ ಲಸಿಕಾ ಅಭಿಯಾನ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮಾಹಿತಿ ಪಡೆದರು.

ನಗರದ ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ವೀಡಿಯೋ ಸಂವಾದ ಮೂಲಕ ಜಿಲ್ಲಾಧಿಕಾರಿ ಅವರು ಬುಧವಾರ ಮಾಹಿತಿ ಪಡೆದು ಮಾತನಾಡಿದರು.

ಸರ್ಕಾರ ರಾಜ್ಯದಾದ್ಯಂತ ತಾ. ೧೭ ರಂದು ಬೃಹತ್ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು, ಆ ದಿಸೆಯಲ್ಲಿ ಕೊಡಗು ಜಿಲ್ಲೆಯಲ್ಲಿಯೂ ಸಹ ಕೋವಿಡ್ ಲಸಿಕಾ ಮೇಳ ನಡೆಯಲಿದ್ದು, ೧೮ ವರ್ಷ ಮೇಲ್ಪಟ್ಟ ೩೦ ಸಾವಿರ ಮಂದಿಗೆ ಪ್ರಥಮ ಹಂತದ ಕೋವಿಡ್ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿದ್ದು, ಅಗತ್ಯ ಸಿದ್ಧತೆಗೆ ಸೂಚಿಸಿದರು.

ತಾ. ೨೫ ರೊಳಗೆ ಶೇ. ೧೦೦ ರಷ್ಟು ಪ್ರಥಮ ಹಂತದ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಆ ದಿಸೆಯಲ್ಲಿ ತಾ. ೧೭ ರಂದು ನಡೆಯುವ ಬೃಹತ್ ಲಸಿಕಾ ಅಭಿಯಾನ ಯಶಸ್ಸುಗೊಳಿಸುವಂತೆ ಎಲ್ಲಾ ಹಂತದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಹಾಗೂ ಹಾಡಿಗಳಲ್ಲಿ ಕೋವಿಡ್ ನಿರೋಧಕ ಲಸಿಕೆ ಪಡೆಯಲು ಜನರು ಮುಂದೆ ಬರುತ್ತಿಲ್ಲ. ಕೋವಿಡ್ ನಿರೋಧಕ ಲಸಿಕೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿ ೧೮ ವರ್ಷ ಮೇಲ್ಪಟ್ಟವರೆಲ್ಲರಿಗೂ ಕೋವಿಡ್ ಲಸಿಕೆ ನೀಡಲು ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಕಂದಾಯ, ಪಂಚಾಯತ್ ರಾಜ್, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ, ಸಮಗ್ರ ಗಿರಿಜನ ಅಭಿವೃದ್ಧಿ, ಹಿಂದುಳಿದ ವರ್ಗ, ಕಾರ್ಮಿಕ ಹೀಗೆ ಎಲ್ಲಾ ಹಂತದ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕಾ ಅಭಿಯಾನ ಯಶಸ್ಸುಗೊಳಿಸುವಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಕೈಜೋಡಿ ಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಜಿ.ಪಂ. ಸಿಇಒ ಭನ್ವರ್ ಸಿಂಗ್ ಮೀನಾ ಮಾತನಾಡಿ, ಜಿಲ್ಲೆಯ ಯಾವ ಯಾವ ಗ್ರಾಮಗಳಲ್ಲಿ ಲಸಿಕೆ ಪಡೆಯಲು ಹಿಂದೆ ಇದ್ದಾರೆ. ಆ ಗ್ರಾಮಗಳ ಮಾಹಿತಿ ಒದಗಿಸುವಂತಾಗಬೇಕು. ಜೊತೆಗೆ ಹಿಂದೆ ಉಳಿದಿರುವ ಗ್ರಾಮಗಳಲ್ಲಿ ಗ್ರಾ.ಪಂ. ಮಟ್ಟದ ಕಾರ್ಯಪಡೆಯ ಸಮಿತಿ ಸಭೆ ನಡೆಸಿ ೧೮ ವರ್ಷ ಮೇಲ್ಪಟ್ಟವರೆಲ್ಲರೂ ಕೋವಿಡ್ ನಿರೋಧಕ ಲಸಿಕೆ ಪಡೆಯುವಂತಾಗಲು ಜಾಗೃತಿಗೆ ಕ್ರಮವಹಿಸಲಾಗುವುದು ಎಂದರು.

ಜಿಲ್ಲಾ ಲಸಿಕಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಗೋಪಿನಾಥ್ ಅವರು ಜಿಲ್ಲೆಯಲ್ಲಿ ತಾ. ೧೭ ರಂದು ಬೃಹತ್ ಲಸಿಕಾ ಮೇಳವು ೧೧೯ ಕೇಂದ್ರಗಳಲ್ಲಿ ನಡೆಯಲಿದ್ದು, ಪ್ರಥಮ ಹಂತದಲ್ಲಿ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಬೃಹತ್ ಲಸಿಕಾ ಅಭಿಯಾನ ಸಂದರ್ಭದಲ್ಲಿ ಅಗತ್ಯ ದಾಖಲೆ ಇಲ್ಲದಿದ್ದರೂ ಸಹ ೧೮ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವಂತೆ ಡಾ. ಗೋಪಿನಾಥ್ ಅವರು ಕೋರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್ ಮನೆ ಮನೆ ಸರ್ವೆ ಮಾಡಿ ೧೮ ವರ್ಷ ಮೇಲ್ಪಟ್ಟವರಿಗೆ ಪ್ರಥಮ ಆದ್ಯತೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ನೀಡಲು ಶ್ರಮಿಸುವಂತೆ ಕೋರಿದರು.

ಜಿಲ್ಲೆಯಲ್ಲಿ ಪ್ರಥಮ ಹಂತದ ಕೋವಿಡ್ ಲಸಿಕೆ ಪಡೆಯಲು ೧೮ ವರ್ಷ ಮೇಲ್ಪಟ್ಟ ಸುಮಾರು ೫೫ ಸಾವಿರ ಮಂದಿ ಇದ್ದಾರೆ ಎಂದು ಡಿಎಚ್‌ಒ ಅವರು ಮಾಹಿತಿ ನೀಡಿದರು.

ತಾ.ಪಂ. ಇಒ ಶೇಖರ್ ಅವರು ಗ್ರಾಮೀಣ ಪ್ರದೇಶದ ಕೆಲವರ ಬಳಿ ಅಗತ್ಯ ದಾಖಲೆಗಳು ಇಲ್ಲದಿರುವ ಕಾರಣ ಕೋವಿಡ್ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ ಎಂದು ಗಮನಕ್ಕೆ ತಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್, ಡಾ. ಮಹೇಶ್, ಡಾ. ಚೇತನ್, ತಹಶೀಲ್ದಾರ್ ಗೋವಿಂದರಾಜು, ಮಹೇಶ್, ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಇತರರು ಹಲವು ಮಾಹಿತಿ ನೀಡಿದರು.