ಮಡಿಕೇರಿ, ಸೆ. ೧೫: ಮುಂಬರುವ ತಾ. ೨೭ ರಿಂದ ಅಕ್ಟೋಬರ್ ೩ರವರೆಗೆ ಜೋರ್ಡಾನ್ನ ಅಮನ್ನಲ್ಲಿ ನಡೆಯಲಿರುವ ಫಿಬಾ ಏಷ್ಯಾ ಕಪ್ ಮಹಿಳಾ ಬಾಸ್ಕೆಟ್ ಪಂದ್ಯಾವಳಿಗೆ ಭಾರತ ತಂಡದಲ್ಲಿ ಜಿಲ್ಲೆಯ ನವನೀತಾ ಪಟ್ಟೆಮನೆ ಭಾಗವಹಿಸಲಿದ್ದಾರೆ.
ಮೂಲತಃ ಸುಂಟಿಕೊಪ್ಪ ಬಳಿಯ ಗದ್ದೆಹಳ್ಳದ ಪಟ್ಟೆಮನೆ ಉದಯಕುಮಾರ್ ಹಾಗೂ ಗಿರಿಜಾ ದಂಪತಿಯ ಪುತ್ರಿ ನವನೀತಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಇವರೊಂದಿಗೆ ಕರ್ನಾಟಕ ರಾಜ್ಯದಿಂದ ಎಸ್.ಎಂ. ಸಹನಾ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಏಕಲವ್ಯ ಪ್ರಶಸ್ತಿ ಪಡೆದಿರುವ ನವನೀತಾ ಪ್ರಸ್ತುತ ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಇದೇ ಸುಂಟಿಕೊಪ್ಪ ಬಳಿಯ ಕಂಬಿಬಾಣೆಯ ಹೊನ್ನಂಪಾಡಿ ಅಂಕಿತಾ ಸುರೇಶ್ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು.
ಭಾರತ, ಕೊರಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ‘ಎ’ ಗುಂಪಿನಲ್ಲಿವೆ. ತಾ. ೨೭ ರಂದು ಭಾರತ ತಂಡವು ಜಪಾನ್ ತಂಡದೆದುರು ಸೆಣಸಲಿದೆ. ೨೮ ರಂದು ಕೊರಿಯ, ೨೯ ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಶಿರಿನ್ ಲಿಮಯೆ ನಾಯಕಿಯಾಗಿರುವ ತಂಡದಲ್ಲಿ ಮಧುಕುಮಾರಿ, ಶೃತಿ ಅರವಿಂದ್, ಎಸ್. ಪುಷ್ಪ, ನವನೀತಾ ಪಿ.ಯು., ಎಸ್. ಸತ್ಯ, ಎಂ. ನಿಶಾಂತಿ, ವೈಷ್ಣವಿ ಯಾದವ್, ಶ್ರೀಕಲಾರಾಣಿ, ಅನುಮರಿಯಾ, ಸ್ಟೆಫಿನಿಕ್ಸೋನ್ ಮತ್ತು ಸಹನಾ ಎಸ್.ಎಂ. ಭಾಗವಹಿಸಲಿದ್ದಾರೆ. ಜೊರಾನ್ ವಿಸಿಕ್ ಮುಖ್ಯ ಕೋಚ್, ಸಹಾಯಕ ಕೋಚ್ಗಳಾಗಿ ಶ್ರೀನಿವಾಸಮೂರ್ತಿ, ಮೀನಲತಾ ಎಂ., ಫಿಸಿಯೋ ಆಗಿ ಅಹನಾ ಪುರಾಣಿಕ್, ರೆಫರಿಯಾಗಿ ಆರ್. ರಾಕೇಶ್ ಕಾರ್ಯನಿರ್ವಹಿಸಲಿದ್ದಾರೆ. ?ಸಂತೋಷ್